ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಜಾಬ್‌ನ ಖ್ಯಾತ ಗಾಯಕ ರಾಜ್‌ವೀರ್ ಜವಾಂಡ ಸಾವನ್ನಪ್ಪಿದ್ದಾರೆ.
ಸೆಪ್ಟೆಂಬರ್ ತಿಂಗಳ ಕೊನೆಯಲ್ಲಿ ಹಿಮಾಚಲ ಪ್ರದೇಶ ಪ್ರವಾಸದಲ್ಲಿದ್ದಾಗ ಅಪಘಾತಕ್ಕೀಡಾಗಿದ್ದ ರಾಜ್‌ವೀರ್ ಜವಾಂಡ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದಿದ್ದು, ಅವರ ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿತ್ತು. ವೆಂಟಿಲೇಟರ್ ನೆರವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೆ ಅಗಲಿದ್ದಾರೆ.
ವೇಗವಾಗಿ ಸಾಗುತ್ತಿರುವಾಗ ರಸ್ತೆಯಲ್ಲಿ ಏಕಾಏಕಿ ದನ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿ ಅವರ ತಲೆಗೆ ತೀವ್ರ ಗಾಯಗಳಾಗಿತ್ತು. ಅಪಘಾತದ ಬೆನ್ನಲ್ಲೇ ಗಂಬೀರವಾಗಿ ಗಾಯಗೊಂಡ ರಾಜ್‌ವೀರ್‌ನ ತಕ್ಷಣ ಸಿವಿಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಲೆಗೆ ಹಾಗೂ ಬೆನ್ನು ಮೂಳೆಗೆ ಗಂಭೀರ ಗಾಯ ಆಗಿದ್ದ ಕಾರಣ ಚಿಕಿತ್ಸೆ ವೇಳೆ ರಾಜ್‌ವೀರ್‌ಗೆ ಹೃದಯಾಘಾತ ಸಂಭವಿಸಿತ್ತು. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳುತ್ತಿದಂತೆ ಸಿವಿಲ್ ಆಸ್ಪತ್ರೆಯಿಂದ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ರಾಜ್‌ವೀರ್ ಜವಾಂಡ ಆರೋಗ್ಯ ಪರಿಸ್ಥಿತಿ ಹದೆಗೆಟ್ಟಿದ ಕಾರಣ ಫೋರ್ಟಿಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವೆಂಟಿಲೇಟರ್ ನೆರವು ನೀಡಲಾಗಿತ್ತು. ವೈದ್ಯರು ರಾಜ್‌ವೀರ್ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರು.ಆದ್ರೆ ದುರಾದೃಷ್ಟವಶಾತ್ ಹನ್ನೊಂದು ದಿನಗಳ ಕಾಲ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದ ರಾಜ್‌ವೀರ್ ಇಂದು ನಿಧನರಾಗಿದ್ದು, ಸಂಗೀತ ಲೋಕದಲ್ಲಿ ತಾರೆಯಾಗಿ ಮಿಂಚಿ, ಕೇವಲ 35 ವರ್ಷಕ್ಕೆ ತಮ್ಮ ಪಯಣ ನಿಲ್ಲಿಸಿದ್ದಾರೆ.
ಕಳೆದ ಒಂದು ದಶಕದಿಂದ ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಜವಾಂಡಾ, ಹೃದಯಕ್ಕೆ ಹತ್ತಿರವಾಗುವ ಸಾಕಷ್ಟು ಜನಪ್ರಿಯ ಹಾಡುಗಳನ್ನು ನೀಡಿದ್ದು, ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕೆಲ ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ರಾಜ್‌ವೀರ್, ತಮ್ಮ ಪತ್ನಿಯನ್ನು ಅಗಲಿದ್ದು, ಅಪಘಾತಕ್ಕೂ ಮುನ್ನದ ದಿನ ರಾಜ್‌ವೀರ್ ತಮ್ಮ ಹೊಸ ಆಲ್ಬಮ್ ಸಾಂಗ್ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು.
ಯಾವುದೇ ಹೊಸ ಹಾಡುಗಳ ಟೀಸರ್‌ಗಳು ಬಿಡುಗಡೆಯಾದರೂ ತಮ್ಮ ಆಪ್ಡೇಟ್ ಮಾಡುತ್ತಿದ್ದರು. ‘ಜೋರ್’, ‘ಸೋಹ್ನಿ’, ‘ರಬ್ಬ್ ಕರ್ಕೆ’, ‘ತು ದಿಸ್ದಾ ಪೈಂದಾ’, ‘ಮೋರ್ನಿ’, ‘ಧೀಯಾನ್’, ‘ಖುಷ್ ರೆಹಾ ಕರ್’, ‘ಜೋಗಿಯಾ’ ಮೊದಲಾದವು ಅವರ ಜನಪ್ರಿಯ ಗೀತೆಗಳಾಗಿದ್ದು, ಇಂದಿಗೂ ಸಹಸ್ರಾರು ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದಿದೆ.