ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಮೇಘಸ್ಪೋಟವಾಗಿದ್ದು, ಭಾರಿ ಪ್ರವಾಹದಿಂದಾಗಿ ಕೇರಳ ಮೂಲದ 28 ಪ್ರವಾಸಿಗರ ಗುಂಪು ಕಾಣೆಯಾಗಿದೆ ಎಂದು ಅವರ ಕುಟುಂಬ ಸದಸ್ಯರು ಬುಧವಾರ ತಿಳಿಸಿದ್ದಾರೆ.
28 ವ್ಯಕ್ತಿಗಳಲ್ಲಿ 20 ಜನ ಮಹಾರಾಷ್ಟ್ರದಲ್ಲಿ ನೆಲೆಸಿರುವ ಕೇರಳದವರು ಎಂದು ವರದಿಯಾಗಿದ್ದರೆ, ಉಳಿದ ಎಂಟು ಜನ ಕೇರಳದ ವಿವಿಧ ಜಿಲ್ಲೆಯವರು ಎಂದು ಗುಂಪಿನಲ್ಲಿರುವ ದಂಪತಿಗಳ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಆ ದಿನ ಬೆಳಗ್ಗೆ 8.30 ರ ಸುಮಾರಿಗೆ ಅವರು ಉತ್ತರಕಾಶಿಯಿಂದ ಗಂಗೋತ್ರಿಗೆ ತೆರಳುತ್ತಿದ್ದರು. ಆ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಅವರನ್ನು ಸಂಪರ್ಕಿಸಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
10 ದಿನಗಳ ಉತ್ತರಾಖಂಡ ಪ್ರವಾಸವನ್ನು ಏರ್ಪಡಿಸಿದ ಹರಿದ್ವಾರ ಮೂಲದ ಟ್ರಾವೆಲ್ ಏಜೆನ್ಸಿಯು, ಈ ಪ್ರವಾಸಿಗರ ಗುಂಪಿನ ಇರುವಿಕೆಯ ಕುರಿತು ಯಾವುದೇ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಒಂಬತ್ತು ಸೇನಾ ಸಿಬ್ಬಂದಿ ಸೇರಿದಂತೆ 59 ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಭಾರತೀಯ ಸೇನೆ ಮತ್ತು ಪರಿಹಾರ ತಂಡಗಳಿಂದ ಬೃಹತ್ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.