ಹೊಸದಿಗಂತ ವರದಿ,ಮಂಗಳೂರು:
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ಇಡೀ ದಿನ ಎಡೆಬಿಡದೆ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಶುಕ್ರವಾರವೂ ಭಾರಿ ಮಳೆ ಮುಂದುವರೆಯುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ಭಾರಿ ಮಳೆಯಿಂದಾಗಿ ಜಿಲ್ಲೆಯ ನದಿ, ಹಳ್ಳ, ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ದಿನವಿಡೀ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗಿದೆ. ನಗರದಲ್ಲಿ ಗುರುವಾರ ಬೆಳಗ್ಗಿನಿಂದ ರಾತ್ರಿ ವರಗೆ ನಿರಂತರ ಮಳೆ ಸುರಿದಿದೆ. ಬೆಳಗ್ಗಿನ ವೇಳೆ ಧಾರಾಕಾರವಾಗಿ ಮಳೆಯಾದ ಕಾರಣ ತಗ್ಗುಪ್ತದೇಶಗಳಲ್ಲಿ ಕೃತಕ ನೆರೆ ಉಂಟಾಗಿತ್ತು. ಭಾರಿ ಮಳೆ ಹಿನ್ನೆಲೆಯಲ್ಲಿ ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ರಜೆ ನೀಡಲಾಗಿತ್ತು.
ಜಿಲ್ಲೆಯಲ್ಲಿ ಮಂಗಳವಾರದಿಂದಲೇ ನಿರಂತರ ಮಳೆಯಾಗುತ್ತಿದ್ದು, ಗಣೇಶೋತ್ಸವ ಸಂಭ್ರಮಕ್ಕೆ ಅಡ್ಡಿಯಾಗಿದೆ.
ಗುರುವಾರ ಬೆಳಗ್ಗೆ ದೊರೆತ ಮಾಹಿತಿಯಲ್ಲಿ ಜಿಲ್ಲೆಯ ದಿನದ ಸರಾಸರಿ ಮಳೆ 49.6 ಮಿ.ಮೀ. ಆಗಿದೆ. ಮಂಗಳೂರಿನಲ್ಲಿ ಗರಿಷ್ಠ 85.5 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 35.2 ಮಿ.ಮೀ, ಬಂಟ್ವಾಳ 43.4 ಮಿ.ಮೀ, ಪುತ್ತೂರು 53.8 ಮಿ.ಮೀ, ಸುಳ್ಯ 72.8 ಮಿ.ಮೀ, ಮೂಡುಬಿದಿರೆ 32.4 ಮಿ.ಮೀ, ಕಡಬ 37.7 ಮಿ.ಮೀ, ಮೂಲ್ಕಿ 70 ಮಿ.ಮೀ. ಹಾಗೂ ಉಳ್ಳಾಲ 46.8 ಮಿ.ಮೀ. ಮಳೆ ವರದಿಯಾಗಿದೆ.
ಕರಾವಳಿಯಲ್ಲಿ ಗಂಟೆಗೆ 40ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹಾಗಾಗಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಸಂಭವಿಸಬಹುದಾದ ಹಾನಿ ತಪ್ಪಿಸಲು ಎನ್‌ಡಿಆರ್‌ಎಫ್ ತಂಡ 24*7 ರೀತಿಯಲ್ಲಿ ಸನ್ನದ್ದವಾಗಿದೆ.