ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಹಿರಿಯ ನಟ ಧರ್ಮೇಂದ್ರ ಅವರನ್ನು ದಾಖಲು ಮಾಡಲಾಗಿದೆ ಎಂಬ ಸುದ್ದಿ ಮನರಂಜನಾ ಲೋಕದಲ್ಲಿ ಆತಂಕ ಮೂಡಿಸಿದೆ. 89 ವರ್ಷದ ಈ ದಿಗ್ಗಜ ನಟ ಕಳೆದ ವಾರ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದರೂ, ಈಗ ಅವರನ್ನು ಮತ್ತೆ ದಾಖಲಿಸಿರುವುದು ಅಭಿಮಾನಿಗಳಲ್ಲಿ ಚಿಂತೆ ಉಂಟುಮಾಡಿದೆ. ಅವರ ಆರೋಗ್ಯದ ಬಗ್ಗೆ ಸ್ಪಷ್ಟ ಮಾಹಿತಿ ಹೊರಬಾರದಿದ್ದರೂ, ಕುಟುಂಬದ ಮೂಲಗಳು ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿವೆ.
ಧರ್ಮೇಂದ್ರ ಅವರ ಪುತ್ರ ಸನ್ನಿ ಡಿಯೋಲ್ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, “ಅಪ್ಪನ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ. ಎಲ್ಲರೂ ಅವರ ಚೇತರಿಕೆಗೆ ಪ್ರಾರ್ಥಿಸಬೇಕೆಂದು ವಿನಂತಿಸುತ್ತೇನೆ. ದಯವಿಟ್ಟು ನಮ್ಮ ಕುಟುಂಬದ ಗೌಪ್ಯತೆಯನ್ನು ಗೌರವಿಸಿ,” ಎಂದು ಮನವಿ ಮಾಡಿದ್ದಾರೆ.
ಈ ನಡುವೆ ನಟಿ ಮತ್ತು ಧರ್ಮೇಂದ್ರ ಅವರ ಪತ್ನಿ ಹೇಮಾ ಮಾಲಿನಿ ಸೋಮವಾರ ಸಂಜೆ ಆಸ್ಪತ್ರೆಗೆ ಆಗಮಿಸಿ ಅವರ ಆರೋಗ್ಯದ ವಿಚಾರ ತಿಳಿದುಕೊಂಡಿದ್ದಾರೆ. ವರದಿಗಳ ಪ್ರಕಾರ, ಧರ್ಮೇಂದ್ರ ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ತಿಳಿದುಬಂದಿದ್ದು, “ಅವರು ಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ,” ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

