Friday, September 5, 2025

Viral | 14 ವರ್ಷಗಳ ಬ್ಯಾಂಕಿಂಗ್ ಅನುಭವ, ಆದ್ರೂ ಕೆಲಸವಿಲ್ಲ! ಫುಟ್‌ಪಾತ್‌ನಲ್ಲಿ ಕೂತು ಉದ್ಯೋಗ ಕೋರಿದ ವ್ಯಕ್ತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಜನನಿಬಿಡ ಸಿಗ್ನಲ್‌ನಲ್ಲಿ ಫುಟ್‌ಪಾತ್‌ನಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕೈಯಲ್ಲಿ ಚೀಟಿ ಹಿಡಿದು, ಬೆನ್ನಿಗೆ ಬ್ಯಾಗ್ ಹಾಕಿಕೊಂಡು ಸಹಾಯ ಕೋರುತ್ತಿರುವ ಆ ವ್ಯಕ್ತಿ ತಕ್ಷಣವೇ ಜನರ ಗಮನ ಸೆಳೆದಿದ್ದಾರೆ.

ವ್ಯಕ್ತಿ ಹಿಡಿದುಕೊಂಡಿರುವ ಚೀಟಿಯಲ್ಲಿ ಅವರು 14 ವರ್ಷಗಳ ಬ್ಯಾಂಕಿಂಗ್ ಅನುಭವ ಹೊಂದಿದ್ದರೂ, ಈಗ ಕೆಲಸವಿಲ್ಲದೆ, ಮನೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದೇನೆ, ದಯವಿಟ್ಟು ಸಹಾಯ ಮಾಡಿ ಎಂದು ಬರೆದಿದ್ದಾರೆ. ಜೊತೆಗೆ ಡಿಜಿಟಲ್ ಪಾವತಿಗಳಿಗಾಗಿ QR ಕೋಡ್ ಸಹ ಅಳವಡಿಸಿದ್ದರು.

ಈ ಚಿತ್ರಗಳನ್ನು ರೆಡ್ಡಿಟ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು, “ಇದು ಸಮಾಜದ ವೈಫಲ್ಯದ ಪರಿಣಾಮವೇ ಅಥವಾ ವೈಯಕ್ತಿಕ ಆಯ್ಕೆಗಳ ಪರಿಣಾಮವೇ?” ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ಬಂದಿದ್ದು, ಕೆಲವರು ಅವರಿಗೆ ಉದ್ಯೋಗದ ಅವಕಾಶ ದೊರಕಲಿ ಎಂದು ಹಾರೈಸಿದರೆ, ಇನ್ನು ಕೆಲವರು “ಬೆಂಗಳೂರು ನಗರದಲ್ಲಿ ಕೆಲಸ ಮಾಡಲು ಇಚ್ಛೆ ಇದ್ದರೆ ಸಾಕಷ್ಟು ಅವಕಾಶಗಳಿವೆ” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ನಿರುದ್ಯೋಗವು ಮಾನಸಿಕ ಖಿನ್ನತೆಗೆ ಕಾರಣವಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಘಟನೆ ಒಬ್ಬ ವ್ಯಕ್ತಿಯ ವೈಯಕ್ತಿಕ ಹೋರಾಟವಷ್ಟೇ ಅಲ್ಲ, ಸಮಾಜದ ನಿರುದ್ಯೋಗ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನೂ ಬೆಳಕಿಗೆ ತರುತ್ತದೆ. ಸಹಾಯ ಅಗತ್ಯವಿರುವವರಿಗೆ ನೆರವು ನೀಡುವುದೇ ಮಾನವೀಯತೆ, ಆದರೆ ಅವರ ಕಥೆಯನ್ನು ತಿಳಿಯದೆ ನಿರ್ಣಯಿಸುವುದು ತಪ್ಪಾಗುತ್ತದೆ.

ಇದನ್ನೂ ಓದಿ