ಹೊಸದಿಗಂತ ಡಿಜಿಟಲ್ ಡೆಸ್ಕ್:
“ಎರಡು ಜಡೆಗಳು ಒಟ್ಟಿಗೇ ಇರಲು ಸಾಧ್ಯವಿಲ್ಲ” ಎಂಬ ಹಳೆಯ ಗಾದೆ ಇಂದಿಗೂ ಹಲವು ಮನೆಗಳಲ್ಲಿ ಸತ್ಯವಾಗುತ್ತಿದೆ. ಅದರಲ್ಲೂ ಅತ್ತೆ-ಸೊಸೆ ನಡುವಿನ ಹೊಂದಾಣಿಕೆಯ ಕೊರತೆಯು ಸಾಮಾನ್ಯ ಸಂಗತಿಯಾಗಿದೆ. ಆದರೆ, ದೆಹಲಿಯ ಒಂದು ಕುಟುಂಬದಲ್ಲಿ ಅತ್ತೆ-ಸೊಸೆ ಸಂಘರ್ಷಕ್ಕೆ ಅತ್ಯಂತ ಸಣ್ಣ ಕಾರಣವೊಂದು ಮೂಲವಾಗಿದೆ. ಅದುವೇ ಮನೆಯಲ್ಲಿ ಈರುಳ್ಳಿ-ಬೆಳ್ಳುಳ್ಳಿ ಬಳಕೆಯ ನಿಷೇಧ!
ಐದು ವರ್ಷಗಳ ಹಿಂದೆ ವಿವಾಹವಾದ ದೆಹಲಿಯ ವ್ಯಕ್ತಿಯೊಬ್ಬರು ತಮ್ಮ ಈ ವಿಚಿತ್ರ ಸನ್ನಿವೇಶವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. “ನಾವು ನನ್ನ ಪೋಷಕರಿಂದ ದೂರ ಬದುಕಬೇಕೇ?” ಎಂಬ ಶೀರ್ಷಿಕೆಯಡಿಯಲ್ಲಿ ಅವರು ತಮ್ಮ ವೈವಾಹಿಕ ಜೀವನದಲ್ಲಿ ಮದುವೆಯ ನಂತರ ಬಂದ ಬದಲಾವಣೆಗಳನ್ನು ವಿವರಿಸಿದ್ದಾರೆ.
ಪೋಸ್ಟ್‌ನಲ್ಲಿ ಅವರು, “ನಾನು ಮದುವೆಯಾದಾಗಿನಿಂದ ನನ್ನ ಹೆತ್ತವರ ನಡವಳಿಕೆಯು ಬಹಳ ಬದಲಾಗಿದೆ” ಎಂದು ಹೇಳಿಕೊಂಡಿದ್ದಾರೆ. ಅವರ ತಾಯಿಯವರು ಕಟ್ಟುನಿಟ್ಟಾದ ಆಹಾರ ಮತ್ತು ಧಾರ್ಮಿಕ ನಿಯಮಗಳನ್ನು ಪಾಲಿಸುತ್ತಾರೆ. ಈ ನಿಯಮಗಳ ಭಾಗವಾಗಿ ಮನೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಆ ವ್ಯಕ್ತಿ ಮತ್ತು ಅವರ ಪತ್ನಿ ಪ್ರಾರಂಭದಲ್ಲಿ ಈ ನಿಯಮಗಳನ್ನು ಗೌರವಿಸಲು ಪ್ರಯತ್ನಿಸಿದರು. ಆದರೆ, ಈ ‘ಈರುಳ್ಳಿ-ಬೆಳ್ಳುಳ್ಳಿ ನಿಷೇಧ’ವೇ ಪದೇ ಪದೇ ವಾದ-ವಿವಾದಗಳಿಗೆ ಕಾರಣವಾಗುತ್ತಿತ್ತು. “ನನ್ನ ತಾಯಿ ಕೆಲವೊಮ್ಮೆ ನಮ್ಮ ಆಹಾರಕ್ರಮದ ಬಗ್ಗೆ ಅತಿಯಾಗಿ ಕಟ್ಟುನಿಟ್ಟಾಗಿರುತ್ತಾರೆ. ನಾವು ಅವರ ನಿಯಮಗಳನ್ನು ಅನುಸರಿಸುತ್ತೇವೆ, ಆದರೆ ನನ್ನ ಹೆಂಡತಿಗೆ ಇದು ಇಷ್ಟವಿರಲಿಲ್ಲ,” ಎಂದು ಅವರು ರೆಡ್ಡಿಟ್‌ನಲ್ಲಿ ಬರೆದಿದ್ದಾರೆ.
ಸಣ್ಣ ವಿಷಯದಿಂದ ಪ್ರಾರಂಭವಾದ ಈ ವೈಮನಸ್ಸು ಈಗ ದೊಡ್ಡ ಸ್ವರೂಪ ಪಡೆದುಕೊಂಡಿದೆ. ತಮ್ಮ ಪ್ರತ್ಯೇಕ ಸಂಸಾರಕ್ಕೆ ಈ ‘ಈರುಳ್ಳಿ-ಬೆಳ್ಳುಳ್ಳಿ’ಯೇ ಕಾರಣ ಎಂದು ಹೇಳಿರುವ ವ್ಯಕ್ತಿಯ ಪತ್ನಿ, ಈಗ ಅತ್ತೆ-ಮಾವನಿಂದ ದೂರ, ಪ್ರತ್ಯೇಕವಾಗಿ ವಾಸಿಸಲು ಬಯಸುತ್ತಿದ್ದಾರೆ. ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಹಲವು ನೆಟ್ಟಿಗರು, ದಂಪತಿಯು ಪ್ರತ್ಯೇಕವಾಗಿ ವಾಸಿಸುವುದೇ ಉತ್ತಮ, ಹಾಗೂ ಇದು ಮಗು ಮತ್ತು ಪತ್ನಿಗೆ ಉತ್ತಮ ಪರಿಸರವನ್ನು ಕಲ್ಪಿಸುತ್ತದೆ ಎಂದು ಸಲಹೆ ನೀಡಿದ್ದಾರೆ.

