ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಐಸಿಸ್ ಭಯೋತ್ಪಾದಕರು ಮತ್ತು ಅತ್ಯಾಚಾರಿಗಳು ಸೇರಿದಂತೆ ಕೈದಿಗಳು ಜೈಲಿನ ಆವರಣದೊಳಗೆ ಮೊಬೈಲ್ ಫೋನ್ ಬಳಸಿ ದೂರದರ್ಶನ ನೋಡುತ್ತಿರುವ ವೀಡಿಯೊ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದ್ದು, ಈಗ, ಜೈಲಿನಿಂದ ಮತ್ತೊಂದು ಅಂತಹುದೇ ವೀಡಿಯೊ ವೈರಲ್ ಆಗಿದೆ.
ಕೈದಿಗಳು ಮದ್ಯ ಮತ್ತು ತಿಂಡಿಗಳೊಂದಿಗೆ ಭರ್ಜರಿ ಪಾರ್ಟಿ ಮಾಡುತ್ತಿರುವುದು ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜೊತೆಗೆ ನಾಲ್ಕು ಸಣ್ಣ ಮದ್ಯದ ಬಾಟಲಿಗಳು ಸಾಲಾಗಿ ಇಟ್ಟಿದ್ದು, ಅದರ ಪಕ್ಕದಲ್ಲೇ ಖೈದಿಗಳು ಪಾರ್ಟಿ ಮಾಡುತ್ತಿರುವುದು ಕಾಣಿಸುತ್ತದೆ.
ವಿಡಿಯೋ ವೈರಲ್ ಆಗುತ್ತಿದಂತೆ ಜೈಲಿನಲ್ಲಿನ ಭದ್ರತಾ ಲೋಪಗಳಿಗೆ ಕಾರಣರಾದವರನ್ನು ಗುರುತಿಸಲು ಜೈಲು ಅಧಿಕಾರಿಗಳು ಆಂತರಿಕ ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, “ಜೈಲಿನೊಳಗೆ ಖೈದಿಗಳಿಗೆ ಇಷ್ಟೊಂದು ಸ್ವಾತಂತ್ರ್ಯ ಹೇಗೆ?” ಎಂಬ ಪ್ರಶ್ನೆ ಇದೀಗ ಎಲ್ಲರಲ್ಲೂ ಮೂಡಿದೆ.

