Monday, December 15, 2025

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: 1 ಕೋಟಿ ನಕಲಿ ಮತದಾರರಿಗೆ ಕೊಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳದಲ್ಲಿ ನಡೆದ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಅಚ್ಚರಿಯ ಸಂಗತಿಗಳು ಒಂದೊಂದಾಗಿ ಹೊರಬರುತ್ತಿವೆ. ವಯಸ್ಸಿನ ಲೆಕ್ಕಾಚಾರದಲ್ಲೇ ತೀವ್ರ ಅಸಮತೋಲನ ಕಂಡುಬಂದಿದ್ದು, ಕೆಲ ಪ್ರಕರಣಗಳಲ್ಲಿ ತಂದೆ-ಮಗನ ವಯಸ್ಸಿನ ವ್ಯತ್ಯಾಸ ಕೇವಲ 15 ವರ್ಷಗಳಾಗಿದ್ದರೆ, 40 ವರ್ಷಕ್ಕೂ ಕಡಿಮೆ ವಯಸ್ಸಿನ ಅಜ್ಜಂದಿರ ವಿವರಗಳೂ ದಾಖಲಾಗಿರುವುದು ಬೆಳಕಿಗೆ ಬಂದಿದೆ. ಈ ಎಲ್ಲ ದೋಷಪೂರ್ಣ ಮಾಹಿತಿಗಳು ಚುನಾವಣಾ ಆಯೋಗದ ಗಮನ ಸೆಳೆದಿದ್ದು, ಪ್ರಕ್ರಿಯೆಯ ಮೇಲಿನ ನಿಖರತೆಯ ಪ್ರಶ್ನೆಯನ್ನು ಎತ್ತಿದೆ.

ಪರಿಷ್ಕರಣೆಯ ಪ್ರಾಥಮಿಕ ಪರಿಶೀಲನೆಯಲ್ಲಿ ಸುಮಾರು 85 ಲಕ್ಷ ಮತದಾರರ ವಿವರಗಳಲ್ಲಿ ತಪ್ಪುಗಳಿರುವುದು ಪತ್ತೆಯಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು ಸುಮಾರು 1.38 ಕೋಟಿ ಮತದಾರರ ದಾಖಲೆಗಳನ್ನು ಮರುಪರಿಶೀಲನೆ ಮಾಡುವ ನಿರ್ಧಾರಕ್ಕೆ ಬಂದಿದೆ. ಮತದಾರರ ಪಟ್ಟಿಯ ವಿಶ್ವಾಸಾರ್ಹತೆಯನ್ನು ಕಾಪಾಡುವುದು ಪ್ರಜಾಪ್ರಭುತ್ವದ ಮೂಲ ಅಂಶವಾಗಿರುವುದರಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ.

ಇದೇ ವೇಳೆ, ಪರಿಶೀಲನೆಯ ಸಂದರ್ಭದಲ್ಲಿ ಕನಿಷ್ಠ 57 ಲಕ್ಷಕ್ಕೂ ಹೆಚ್ಚು ಮತದಾರರು ವಾಸ್ತವವಾಗಿ ಪತ್ತೆಯಾಗಿಲ್ಲ ಎಂಬುದು ದೃಢಪಟ್ಟಿದೆ. ಇನ್ನೂ 24 ಲಕ್ಷಕ್ಕೂ ಅಧಿಕ ಮೃತ ವ್ಯಕ್ತಿಗಳ ಹೆಸರುಗಳು ಪಟ್ಟಿಯಲ್ಲಿ ಮುಂದುವರಿದಿರುವುದು ಕಂಡುಬಂದಿದೆ. ಹಲವರು ವಿಳಾಸ ಬದಲಾಯಿಸಿಕೊಂಡಿದ್ದು, ಕೆಲವು ಹೆಸರುಗಳು ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿರುವ ಪ್ರಕರಣಗಳೂ ಪತ್ತೆಯಾಗಿವೆ. ವಿವಿಧ ಕಾರಣಗಳಿಂದ ಲಕ್ಷಾಂತರ ಅರ್ಜಿಗಳನ್ನು ಸಂಗ್ರಹಿಸಲು ಸಾಧ್ಯವಾಗಿಲ್ಲ ಎನ್ನಲಾಗಿದ್ದು, ಮುಂದಿನ ಹಂತದಲ್ಲಿ ಸಮಗ್ರ ಪ್ರಕ್ರಿಯೆ ನಡೆಯಲಿದೆ. ಈ ಬೆಳವಣಿಗೆಗಳು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ಮೇಲಿನ ಪರಿಶೀಲನೆಯನ್ನು ಮತ್ತಷ್ಟು ತೀವ್ರಗೊಳಿಸುವಂತಾಗಿದೆ.

error: Content is protected !!