Saturday, August 30, 2025

ಕುಕ್ಕರ್ ಬಾಂಬ್ ಸ್ಫೋಟ ಆರೋಪಿಗಳಿಗೆ ವಿದೇಶದಿಂದ ಹಣ ಸಂದಾಯ?: ತನಿಖೆಗೆ ಮುಂದಾದ ಇಡಿ!

ಹೊಸದಿಗಂತ ವರದಿ,ಮಂಗಳೂರು:

ಮಂಗಳೂರು ನಗರದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಆರೋಪಿಗಳಿಗೆ ಹಣ ಎಲ್ಲಿಂದ ಪೂರೈಕೆಯಾಗಿದೆ ಎಂಬುದರ ತನಿಖೆಗೆ ಇಡಿ ಮುಂದಾಗಿದೆ.

ನ್ಯಾಯಾಲಯದ ಅನುಮತಿ ಪಡೆದು ಆರೋಪಿಗಳನ್ನು ವಿಚಾರಣೆ ನಡೆಸಲು ಇಡಿ ಅಧಿಕಾರಿಗಳು ಮುಂದಾಗಿದ್ದಾರೆ.

2022ರಲ್ಲಿ ಸಂಭವಿಸಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಎನ್‌ಐಎ ಅಧಿಕಾರಿಗಳು ರಾಜ್ಯದ ವಿವಿಧ ಕಡೆ ದಾಳಿ ಮಾಡಿ ಹಲವರನ್ನು ಬಂಧಿಸಿ ಜೈಲಿಗಟ್ಟಿದ್ದರು. ತನಿಖೆಯ ವೇಳೆ ಅಧಿಕಾರಿಗಳ ಮುಂದೆ ವಿವಿಧ ಕಡೆ ಸ್ಫೋಟಿಸಲು ಸಂಚು ರೂಪಿಸಿರುವುದು ಕೂಡ ಬೆಳಕಿಗೆ ಬಂದಿತ್ತು. ಇಷ್ಟೆಲ್ಲ ಮಾಡಲು ಈ ಆರೋಪಿಗಳಿಗೆ
ಪ್ರಮುಖವಾಗಿ ಹಣದ ಸಹಾಯ ಮಾಡಿದ್ದು ಯಾರು ಎನ್ನುವುದರ ಹಿಂದಿನ ರಹಸ್ಯ ಭೇದಿಸುವುದಕ್ಕೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಿರ್ಧರಿಸಿದ್ದಾರೆ.

ನ್ಯಾಯಾಲಯದ ಅನುಮತಿ ಪಡೆದು ಇ.ಡಿ. ಅಧಿಕಾರಿಗಳು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಆರೋಪಿಗಳು ಅಕ್ರಮವಾಗಿ ಹಣ ಸಂಗ್ರಹಿಸಿದ್ದಾರೆ. ಕೆಲವು ಮುಸ್ಲಿಂ ರಾಷ್ಟ್ರಗಳಿಂದ ವಿವಿಧ ಬ್ಯಾಂಕ್ ಅಕೌಂಟ್‌ಗಳ ಮೂಲಕ ಶಂಕಿತ ಉಗ್ರರಾದ ಶಾರೀಕ್, ಮಾಜ್ ಮುನೀರ್ ಅವರಿಗೆ ಹಣ ಸಂದಾಯವಾಗಿದೆ. ಇನ್ನೂ ಶಾರೀಕ್ ತಾಯಿಯ ಬ್ಯಾಂಕ್ ಖಾತೆ ಮೂಲಕ ಕೂಡಾ ಹಣ ವರ್ಗಾವಣೆ ಆಗಿರುವ ಬಗ್ಗೆ ದಾಖಲೆಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ದೇಶದ ವಿವಿಧ ಕಡೆ ಬಾಂಬ್ ಸ್ಫೋಟಿಸಲು ಆರೋಪಿಗಳು ಸಂಚು ರೂಪಿಸಿದ್ದರು. ಇದಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಆನ್ ಲೈನ್ ಮೂಲಕ ಖರೀದಿಸಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರಿನ ಕಂಕನಾಡಿಯಿಂದ ಆಟೋದಲ್ಲಿ ತೆರಳುವಾಗಿ ಏಕಾಏಕಿ ಕುಕ್ಕರ್ ಬ್ಲಾಸ್ಟ್ ಆದ ರಭಸಕ್ಕೆ ಪ್ರಮುಖ ಆರೋಪಿ ಶಾರೀಕ್ ಮತ್ತು ಆಟೋ ಚಾಲಕ ಪುರುಷೋತ್ತಮ್ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಾರೀಕ್‌ನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಎನ್‌ಐಎ(ರಾಷ್ಟ್ರೀಯ ತನಿಖಾ ಸಂಸ್ಥೆ) ಹಾಗೂ ಸ್ಥಳೀಯ ಪೊಲೀಸರ ಭದ್ರತೆ ನಡುವೆ ಶಾರೀಕ್ ಚಿಕಿತ್ಸೆ ಪಡೆದಿದ್ದನು.

ಇದನ್ನೂ ಓದಿ