ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಅಸಮಾಧಾನವಿದ್ದರೆ ಕಂಪನಿಗಳು ತೊರೆಯಲು ಸ್ವತಂತ್ರವಾಗಿವೆ. ಆದರೆ ಸರ್ಕಾರಕ್ಕೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದರ ಜೊತೆ ಸಂದರ್ಶನದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ‘ನಗರದ ಮೂಲಸೌಕರ್ಯಗಳನ್ನು ಸರಿಪಡಿಸಲು ಸರ್ಕಾರ ಬದ್ಧವಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ನವೆಂಬರ್ ಗಡುವು ನೀಡಲಾಗಿದೆ. ಬೆಂಗಳೂರಿನ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.
ಇದೇ ವೇಳೆ ಉದ್ಯಮಿಗಳ ಬೆಂಗಳೂರು ತೊರೆಯುವ ಟ್ವೀಟ್ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, ‘ಬೆಂಗಳೂರಿನ ಬಗ್ಗೆ ತೃಪ್ತಿ ಇಲ್ಲವೆಂದು ಹೋಗೋರನ್ನು ತಡೆಯಲ್ಲ. ಆದರೆ, ಸರ್ಕಾರಕ್ಕೆ ಬೆದರಿಸಲು, ಬ್ಯಾಕ್‌ಮೇಲ್ ಮಾಡೋಕೆ ಬರಬೇಡಿ. ಕಂಪನಿಗಳು ತಮ್ಮ ಸ್ಥಳವನ್ನು ಬದಲಾಯಿಸುವ ನಿರ್ಧಾರವು ವ್ಯಾಪಾರ ಸಮಸ್ಯೆಗಳ ಕಾರಣದಿಂದಾಗಿರಬಹುದು.ಬೆಂಗಳೂರು ನೀಡುವ ಸೌಲಭ್ಯಗಳು ಮತ್ತು ಪ್ರತಿಭೆಗಳಿಂದ ತೃಪ್ತರಾಗದಿದ್ದರೆ ಯಾರಾದರೂ ಸ್ಥಳಾಂತರಗೊಳ್ಳಲು ಸ್ವತಂತ್ರರು. ಆದರೆ, ಅವರು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಸರ್ಕಾರವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಕೆಲಸ ಮಾಡುವುದಿಲ್ಲ. ನಾವು ರಾಜ್ಯದ ಜನರಿಗೆ ಸೇವೆ ಸಲ್ಲಿಸಬೇಕು. ಯಾರೂ ಬೆಂಗಳೂರಿನಿಂದ ಹೊರಹೋಗುವುದಿಲ್ಲ ಎಂದರು.
ಬೆಂಗಳೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ 112 ಕಿ.ಮೀ. ಫ್ಲೈಓವರ್‌ಗಳು ಮತ್ತು 44 ಕಿ.ಮೀ.ಗಿಂತ ಹೆಚ್ಚು ಎತ್ತರದ ಡಬಲ್ ಡೆಕ್ಕರ್ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ. ಈ ಕೆಲಸ ಶೀಘ್ರದಲ್ಲಿಯೇ ಮುಕ್ತಾಯವಾಗಲಿವೆ. ಬೆಂಗಳೂರು ವೇಗವಾಗಿ ಬೆಳೆಯುತ್ತಿದೆ ಮತ್ತು ಪ್ರತಿದಿನ ನೂರಾರು ಕಂಪನಿಗಳು ಇಲ್ಲಿಗೆ ಬರುತ್ತಿವೆ ಎಂದು ಹೇಳಿದರು.
ನಾನು ಅಧಿಕಾರಿಗಳಿಗೆ ಬದ್ಧತೆಯಿಂದ ಕೆಲಸ ಮಾಡಿ ಸಮಸ್ಯೆ ಬಗೆ ಹರಿಸಲು ತಿಳಿಸಿದ್ದೇನೆ. ಹಣ ಬಿಡುಗಡೆಯಾಗಿದೆ. ಗುತ್ತಿಗೆದಾರರು ಕೆಲಸ ಕೈಗೊಂಡಿದ್ದಾರೆ. ಬೆಂಗಳೂರಿನ ಸ್ವಚ್ಛತೆ ಮತ್ತು ಗುಂಡಿಗಳನ್ನು ಸರಿಪಡಿಸುವುದು ನಮ್ಮ ಆದ್ಯತೆಯಾಗಿದೆ. ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಜಿಬಿಎ ಮುಕ್ತಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.