ಹೊಸದಿಗಂತ ಡಿಜಿಟಲ್ ಡೆಸ್ಕ್:
ದಸರಾ ಹಬ್ಬದ ಆಯುಧ ಪೂಜೆ ಪ್ರಯುಕ್ತ ವಿಧಾನಸೌಧ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ವಿಧಾನಸೌಧದ ಬಹುತೇಕ ಎಲ್ಲ ಕೊಠಡಿಗಳು ಹೂವಿನ ಅಲಂಕಾರ, ರಂಗೋಲಿಯೊಂದಿಗೆ ಕಳೆಗಟ್ಟಿತು.
ಇಂದು ಆಯುಧ ಪೂಜೆ ಪ್ರಯುಕ್ತ ನಿನ್ನೆಯೇ ವಿಧಾನಸೌಧ, ವಿಕಾಸಸೌಧದಲ್ಲಿ ಪೂಜೆ ನೆರವೇರಿಸಲಾಯಿತು. ಇಂದು ಸರ್ಕಾರಿ ರಜಾ ದಿನವಾಗಿರುವುದರಿಂದ ಸಿಬ್ಬಂದಿ ನಿನ್ನೆಯೇ ತಮ್ಮ ಕಚೇರಿ ಕೊಠಡಿಯಲ್ಲಿ ಆಯುಧ ಪೂಜೆ ಕೈಗೊಂಡರು. ಬಹುತೇಕ ಎಲ್ಲ ಕೊಠಡಿ, ಸಚಿವರ ಕೊಠಡಿಯಲ್ಲಿ ಅದ್ದೂರಿಯಾಗಿ ಆಯುಧ ಪೂಜೆ ನೆರವೇರಿಸಲಾಯಿತು.
ಕೊಠಡಿಗಳ ಬಾಗಿಲಿಗೆ, ಒಳಗೆ, ಹೊರಗೆ ಹೂವಿನ ಅಲಂಕಾರ, ಬಾಳೆ ದಿಂಡು, ರಂಗೋಲಿ ಹಾಕುವ ಮೂಲಕ ಹೊಸ ಸ್ಪರ್ಶ ನೀಡಲಾಗಿತ್ತು. ವಿಧಾನಸೌಧ ಹಾಗೂ ವಿಕಾಸಸೌಧದ ಕಾರಿಡಾರುಗಳು ಹೂವಿನ ಅಲಂಕಾರದೊಂದಿಗೆ ಕಳೆ ಗಟ್ಟಿತ್ತು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಮುಖ್ಯಮಂತ್ರಿಗಳ ಕಚೇರಿ, ಸಂಪುಟ ಸಭೆ ಸಭಾಂಗಣ, ಮುಖ್ಯ ಕಾರ್ಯದರ್ಶಿ ಕೊಠಡಿ, ಸಚಿವರುಗಳ ಕಚೇರಿಗಳನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶಕ್ತಿಸೌಧದ ಕಾರಿಡಾರ್ಗಳಲ್ಲಿ ಮಹಿಳಾ ಸಿಬ್ಬಂದಿಗಳು ರಂಗೋಲಿ ಹಾಕುತ್ತಿರುವುದು ಕಂಡು ಬಂತು.