Saturday, September 20, 2025

ನೀರಿನ ಟ್ಯಾಂಕ್‌ನಲ್ಲೇನಿತ್ತು? ಬಾಲಕಿಯರ ಹಾಸ್ಟೆಲ್‌ನ 12 ವಿದ್ಯಾರ್ಥಿನಿಯರು ಅಸ್ವಸ್ಥ

ಹೊಸದಿಗಂತ ವರದಿ ತುಮಕೂರು:

ತುಮಕೂರು ನಗರ ಹೊರವಲಯದ ಕುಣಿಗಲ್ ರಿಂಗ್ ರಸ್ತೆ ಬಳಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಗುರುವಾರ ರಾತ್ರಿ ಊಟ ಸೇವಿಸಿದ ನಂತರ 12 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದಾರೆ.

ಕೂಡಲೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲ್‌ನಲ್ಲಿ ಒಟ್ಟು 165 ಮಕ್ಕಳು ದಾಖಲಾಗಿದ್ದಾರೆ. ಮೂರು ದಿನಗಳ ಹಿಂದೆ ಹಾಸ್ಟೆಲ್‌ನ ಸಂಪ್ ಸ್ವಚ್ಛಗೊಳಿಸಿದ್ದರು. ಅದರಿಂದಲೇ ನೀರು ಪೂರೈಸಲಾಗಿತ್ತು. ಆ ನೀರು ಸೇವಿಸಿ ಅಸ್ವಸ್ಥರಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

’12 ವಿದ್ಯಾರ್ಥಿನಿಯರಿಗೆ ಹೊಟ್ಟೆ ನೋವು, ವಾಂತಿಯಾಗಿದೆ. ನೀರಿನ ಸಂಪ್ ಸ್ವಚ್ಛಗೊಳಿಸಿದ ನಂತರವೇ ಸಮಸ್ಯೆಯಾಗಿದೆ. ಇನ್ನೂ ಎರಡು ದಿನ ನೀರಿನ ಕ್ಯಾನ್ ಬಳಸುವಂತೆ ಸೂಚಿಸಲಾಗಿದೆ. ಕೂಡಲೇ ನೀರು ಪರೀಕ್ಷಿಸುವಂತೆ ತಿಳಿಸಲಾಗಿದೆ. ವಿದ್ಯಾರ್ಥಿನಿಯರು ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಒಬ್ಬ ವೈದ್ಯರನ್ನು ಹಾಸ್ಟೆಲ್ ಬಳಿಯೇ ನಿಯೋಜಿಸಲಾಗಿದೆ’.

ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸಿದ್ದರಾಜು ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ನಂತರ ಹಾಸ್ಟೆಲ್‌ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ