ಹೊಸದಿಗಂತ ಡಿಜಿಟಲ್ ಡೆಸ್ಕ್:
ಶ್ರೀನಗರದ ಐತಿಹಾಸಿಕ ಹಜರತ್‌ಬಾಲ್ ದರ್ಗಾದ ಉದ್ಘಾಟನಾ ಫಲಕದ ಮೇಲೆ ಅಶೋಕ ಸ್ತಂಭದ ಚಿಹ್ನೆಯನ್ನು ಬಳಕೆ ಮಾಡುವ ಅವಶ್ಯಕತೆ ಏನಿತ್ತು ಎಂದು ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಪ್ರಶ್ನಿಸಿದ್ದಾರೆ.
ಶುಕ್ರವಾದ ಈದ್-ಎ-ಮಿಲಾದ್ ಆಚರಣೆಯ ಮಧ್ಯೆ, ಶ್ರೀನಗರದ ಐತಿಹಾಸಿಕ ಹಜರತ್‌ಬಾಲ್ ದರ್ಗಾದಲ್ಲಿ ದೊಡ್ಡ ವಿವಾದ ಭುಗಿಲೆದ್ದಿದ್ದು, ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ, ಹಜರತ್‌ಬಾಲ್ ದರ್ಗಾದ ಉದ್ಘಾಟನಾ ಫಲಕದ ಮೇಲಿದ್ದ ಅಶೋಕ ಸ್ತಂಭದ ಚಿಹ್ನೆಯನ್ನು ಮೂಲಭೂತವಾದಿಗಳ ಗುಂಪೊಂದು ಒಡೆದು ಕಿತ್ತು ಹಾಕಿತ್ತು.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ‘ಧಾರ್ಮಿಕ ಸ್ಥಳದಲ್ಲಿ ನಾಮಫಲಕವೊಂದರ ಮೇಲೆ ರಾಷ್ಟ್ರೀಯ ಚಿಹ್ನೆಯನ್ನು ಇಡಲು ಯಾವ ಬಲವಂತವಿತ್ತು? ಎಂದು ಪ್ರಶ್ನಿಸಿದ್ದು, ಮಾತ್ರವಲ್ಲದೇ ನಾಮಫಲಕದ ಕಲ್ಲಿನ ಮೇಲೆ ರಾಷ್ಟ್ರೀಯ ಚಿಹ್ನೆಯನ್ನು ಇಡಬೇಕೇ ಅಥವಾ ಬೇಡವೇ ಎಂಬದು ಇದೀಗ ದೊಡ್ಡ ಪ್ರಶ್ನೆಯಾಗಿದೆ’ ಎಂದು ಹೇಳಿದ್ದಾರೆ.
ಈ ಚಿಹ್ನೆಯು ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ, ಧಾರ್ಮಿಕ ಸಂಸ್ಥೆಗಳಿಗೆ ಅಲ್ಲ ಎಂದು ಪ್ರತಿಪಾದಿಸಿರುವ ಒಮರ್ ಅಬ್ದುಲ್ಲಾ, ‘ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ‘ತಪ್ಪು’ಗಾಗಿ ಜಮ್ಮು ಮತ್ತು ಕಾಶ್ಮೀರ ವಕ್ಫ್ ಮಂಡಳಿ ಕ್ಷಮೆಯಾಚಿಸಬೇಕು’ ಎಂದು ಹೇಳಿದರು.
ಯಾವುದೇ ಧಾರ್ಮಿಕ ಸ್ಥಳದಲ್ಲಿ ಈ ರೀತಿ ಲಾಂಛನವನ್ನು ಬಳಸುವುದನ್ನು ನಾನು ಎಂದಿಗೂ ನೋಡಿಲ್ಲ. ಮಸೀದಿಗಳು, ದೇವಾಲಯಗಳು ಮತ್ತು ಗುರುದ್ವಾರಗಳು ಸರ್ಕಾರಿ ಸಂಸ್ಥೆಗಳಲ್ಲ. ಇವು ಧಾರ್ಮಿಕ ಸಂಸ್ಥೆಗಳು ಮತ್ತು ಸರ್ಕಾರಿ ಲಾಂಛನಗಳನ್ನು ಧಾರ್ಮಿಕ ಸಂಸ್ಥೆಗಳಲ್ಲಿ ಬಳಸಲಾಗುವುದಿಲ್ಲ ಎಂದರು.
ದೇಶದಲ್ಲಿ ಎಲ್ಲಿಯೂ ಯಾವುದೇ ಧಾರ್ಮಿಕ ಸ್ಥಳದಲ್ಲಿ ರಾಷ್ಟ್ರೀಯ ಲಾಂಛನವನ್ನು ಬಳಸಲಾಗುವುದಿಲ್ಲ. ಗೂಗಲ್‌ನಲ್ಲಿ ಹುಡುಕಿದಾಗ ರಾಷ್ಟ್ರೀಯ ಲಾಂಛನವನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ಬಳಸಲಾಗುತ್ತದೆ ಎಂದು ನೀವು ಕಾಣಬಹುದು ಎಂದರು.
ಏನಿದು ಘಟನೆ?
ಶ್ರೀನಗರದ ಹಜರತ್‌ಬಾಲ್ ದರ್ಗಾ ಇಸ್ಲಾಮಿಕ್ ಪವಿತ್ರ ತಾಣದಲ್ಲಿ ಒಂದಾಗಿದ್ದು, ಅದರಂತೆ ಇತ್ತೀಚೆಗಷ್ಟೇ ದರ್ಗಾದ ನವೀಕರಣ ಕಾರ್ಯ ಮುಗಿದು, ವಕ್ಫ್ ಮಂಡಳಿಯ ಅಧ್ಯಕ್ಷೆ ದಾರಕ್ಷನ್ ಅಂದ್ರಾಬಿಯವರ ನೇತೃತ್ವದಲ್ಲಿ ಇದರ ಅಧಿಕೃತ ಉದ್ಘಾಟನೆ ನಡೆಯಿತು. ಇನ್ನು, ಉದ್ಘಾಟನೆಯ ವೇಳೆ, ದರ್ಗಾದ ಒಳಭಾಗದಲ್ಲಿ ಒಂದು ಸ್ಮಾರಕ ಫಲಕವನ್ನು ಸ್ಥಾಪಿಸಲಾಯಿತು. ಅದರ ಮೇಲೆ ಭಾರತದ ರಾಷ್ಟ್ರೀಯ ಚಿಹ್ನೆಯಾದ ಅಶೋಕ ಸ್ತಂಭದ ಪ್ರತಿರೂಪವಿದೆ. ಆದ್ರೆ, ಈ ಚಿಹ್ನೆಯಲ್ಲಿ ಉಪಸ್ಥಿತ ಪ್ರಾಣಿಗಳ ಆಕಾರಗಳನ್ನು ಕೆಲವರು ವಿರೋಧಿಸಿದ್ದಾರೆ. ಮಾತ್ರವಲ್ಲದೇ ಅದನ್ನು ಕಲ್ಲಿನಿಂದ ಒಡೆದು ಕಿತ್ತು ಹಾಕಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು.
.