ಹೊಸದಿಗಂತ ಡಿಜಿಟಲ್ ಡೆಸ್ಕ್:
ನವರಾತ್ರಿ ಹಬ್ಬದ ಕೊನೆಯ ದಿನವೆಂದು ಕರೆಯಲಾಗುವ ಮಹಾನವಮಿ ಅಥವಾ ನವರಾತ್ರಿಯ 9ನೇ ದಿನದಂದು ಆಯುಧ ಪೂಜೆಗೆ ವಿಶೇಷ ಮಹತ್ವವಿದೆ.
ಆಯುಧ ಪೂಜೆಯನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳದಲ್ಲೂ ನಡೆಸಲಾಗುತ್ತದೆ.
ಮಹಾನವಮಿಯಂದು ಕುಶಲಕರ್ಮಿಗಳು ನಿಖರತೆ ಮತ್ತು ಸೃಜನಶೀಲತೆಗಾಗಿ ದೇವರನ್ನು ಬೇಡಿಕೊಳ್ಳುತ್ತಾ ತಮ್ಮ ಉಪಕರಣಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಆಯುಧ ಪೂಜೆ ಹಿಂದೆಲ್ಲಾ ಕೇವಲ ಶಸ್ತ್ರಾಸ್ತ್ರಗಳ ಪೂಜೆಯಾಗಿತ್ತು. ಈ ದಿನದಂದು ರಾಜರು ತಮ್ಮ ಆಯುಧಗಳಿಗೆ ಪೂಜೆಯನ್ನು ಮಾಡುತ್ತಿದ್ದರು. ಆದರೆ, ಇದೀಗ ಎಲ್ಲಾ ರೀತಿಯ ಉಪಕರಣಗಳಿಗೂ ಪೂಜೆಯನ್ನು ಮಾಡಲಾಗುತ್ತದೆ. ನಿತ್ಯ ಮನೆಯಲ್ಲಿ ಬಳಸುವ ವಾಹನಗಳು, ಮೋಟಾರುಗಳು, ಟಿವಿ, ಫ್ರಿಡ್ಜ್, ಇನ್ನಿತರ ಉಪಕರಣಗಳಿಗೂ ಪೂಜೆಸಲ್ಲಿಸಿ ನಮಗೆ ಒಳಿತು ಮಾಡುವಂತೆ ಬೇಡಲಾಗುತ್ತದೆ.
ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಸ್ಥಾನವಿದೆ. ಪುರಾಣಗಳ ಪ್ರಕಾರ, ದೇವತೆಗಳಿಂದ ಆಯುಧಗಳನ್ನು ಪಡೆದ ದುರ್ಗಾದೇವಿ, ಮಹಿಷಾಸುರನನ್ನು ಕೊಂದು ವಿಜಯ ಸಾಧಿಸಿದಳು. ಹಿಂದಿನ ಕಾಲದಲ್ಲಿ ಕ್ಷತ್ರಿಯರು ಯುದ್ಧಕ್ಕೆ ಮುನ್ನ ಆಯುಧಗಳನ್ನು ಪೂಜಿಸುತ್ತಿದ್ದರು. ಈ ಪೂಜೆಯಿಂದ ಯುದ್ಧದಲ್ಲಿ ಗೆಲುವು ಸಾಧ್ಯ ಎಂಬ ನಂಬಿಕೆ ಇತ್ತು. ಇಂದು ಈ ಸಂಪ್ರದಾಯವು ದೈನಂದಿನ ಜೀವನದ ಉಪಕರಣಗಳಿಗೆ ಕೃತಜ್ಞತೆ ಸಲ್ಲಿಸುವ ರೂಪದಲ್ಲಿ ಆಚರಿಸಲಾಗುತ್ತದೆ.
ಮಹೂರ್ತ
ಆಯುಧ ಪೂಜೆ ದಿನಾಂಕ: 2025ರ ಅಕ್ಟೋಬರ್ 1ರಂದು, ಬುಧವಾರ
ನವಮಿ ತಿಥಿ ಪ್ರಾರಂಭ: 2025ರ ಸೆಪ್ಟೆಂಬರ್ 30ರಂದು ಮಂಗಳವಾರ ಸಂಜೆ 6:6 ರಿಂದ
ನವಮಿ ತಿಥಿ ಮುಕ್ತಾಯ: 2025ರ ಅಕ್ಟೋಬರ್ 1ರಂದು, ಬುಧವಾರ ಸಂಜೆ 7:1ರವರೆಗೆ
ಆಯುಧ ಪೂಜೆಗೆ ಶುಭ ಸಮಯ: 2025ರ ಅಕ್ಟೋಬರ್ 1ರಂದು, ಬುಧವಾರ ಮಧ್ಯಾಹ್ನ 2:12 ರಿಂದ 3:00ರವರೆಗೆ
ಮಹತ್ವ ಏನು?
ಆಯುಧ ಪೂಜೆಯ ದಿನದಂದು ನಾವು ಕೆಲಸದ ವೇಳೆ ಬಳಸುವ ಉಪಕರಣಗಳನ್ನು, ಯಂತ್ರೋಪಕರಣಗಳನ್ನು ಅಥವಾ ಆಯುಧಗಳನ್ನು ಪೂಜಿಸುವುದರಿಂದ ಅದರ ಬಗ್ಗೆ ಗೌರವದ ಭಾವನೆ ಮೂಡುತ್ತದೆ. ತೃಪ್ತಿಯ ಭಾವನೆಯನ್ನು ಹುಟ್ಟು ಹಾಕುತ್ತದೆ. ಮೊದಲು ಯಂತ್ರೋಪಕರಣಗಳನ್ನು ಶುಚಿಗೊಳಿಸಲಾಗುತ್ತದೆ. ಅದಕ್ಕೆ ಅರಿಶಿನ, ಕುಂಕುಮ ಅಥವಾ ಶ್ರೀಗಂಧದ ತಿಲಕವನ್ನಿಟ್ಟು, ಹೂವುಗಳಿಂದ ಅಲಂಕರಿಸಲಾಗುತ್ತದೆ. ಇದು ನಾವು ಬಳಸುವ ಯಂತ್ರೋಪಕರಣಗಳಿಗೆ, ಉಪಕರಣಗಳಿಗೆ ಗೌರವವನ್ನು ಸೂಚಿಸುವ ವಿಧಾನವಾಗಿದೆ. ನಮ್ಮಲ್ಲಿ ಅವುಗಳ ಮಹತ್ವವನ್ನು ಹೆಚ್ಚಿಸುತ್ತದೆ. ನಾವು ಮಾಡುವ ಕೆಲಸದ ಮೇಲೆ ಒಲವನ್ನು ಹೆಚ್ಚಿಸುವ ಕೆಲಸವನ್ನು ಈ ಆಯುಧ ಪೂಜೆ ಮಾಡುತ್ತದೆ.
ಆಯುಧ ಪೂಜಾ ಮಹೂರ್ತ ಯಾವಾಗ? ಇದರ ಮಹತ್ವ ಏನು?
