Wednesday, November 5, 2025

‘ವಸೂಲಿ ಲೆಕ್ಕ ಕೊಡಿ’ ಎಂದ ಮಲ್ಯಗೆ ನಿಮ್ಮ ಹಾಜರಾತಿ ಎಲ್ಲಿ? ಎಂದ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾನು ಪಾವತಿಸಬೇಕಿದ್ದ ಸಂಪೂರ್ಣ ಸಾಲ ತೀರಿಹೋಗಿದ್ದರೂ ಸಹ ಬ್ಯಾಂಕ್‌ಗಳು ತಮ್ಮ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸುತ್ತಿವೆ ಎಂದು ಆರೋಪಿಸಿ, ವಸೂಲಿಯಾಗಿರುವ ಲೆಕ್ಕಪತ್ರ ನೀಡುವಂತೆ ಕೋರಿ ಉದ್ಯಮಿ ಡಾ. ವಿಜಯ್ ಮಲ್ಯ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್‌ನ ಏಕಸದಸ್ಯ ಪೀಠ ನಡೆಸಿದೆ.

ಮಲ್ಯರ ವಾದವೇನು?

ಮಲ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜನ್ ಪೂವಯ್ಯ, ಮಲ್ಯ ಅವರು ಪಾವತಿಸಬೇಕಿದ್ದ 6,200 ಕೋಟಿ ರೂ. ಸಾಲಕ್ಕೆ ಈಗಾಗಲೇ 14,000 ಕೋಟಿ ರೂ. ವಸೂಲಿ ಮಾಡಲಾಗಿದೆ ಎಂದು ವಾದಿಸಿದರು. ಕೇಂದ್ರ ಸರ್ಕಾರದ ಹಣಕಾಸು ಸಚಿವರೇ ಲೋಕಸಭೆಯಲ್ಲಿ 10,200 ಕೋಟಿ ರೂ. ವಸೂಲಿಯಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ, ಸಾಲ ಸಂಪೂರ್ಣ ತೀರಿಹೋಗಿದ್ದರೂ ಪ್ರಕ್ರಿಯೆ ಮುಂದುವರೆಸಿರುವ ಕಾರಣ, ಬ್ಯಾಂಕ್‌ಗಳು ವಸೂಲಿಯಾದ ಸಂಪೂರ್ಣ ಲೆಕ್ಕಪತ್ರವನ್ನು ನೀಡಬೇಕು ಎಂದು ಆಗ್ರಹಿಸಿದರು. ಅಲ್ಲದೆ, ರಿಟ್ ಅರ್ಜಿ ಸಲ್ಲಿಸುವುದು ಸಂವಿಧಾನಾತ್ಮಕ ಹಕ್ಕು ಎಂದು ಅವರು ಪ್ರತಿಪಾದಿಸಿದರು.

ಕೋರ್ಟ್‌ನ ಪ್ರಶ್ನೆ ಮತ್ತು ಬ್ಯಾಂಕ್‌ಗಳ ಆಕ್ಷೇಪ:

ವಿಚಾರಣೆ ವೇಳೆ ಮಧ್ಯಪ್ರವೇಶಿಸಿದ ನ್ಯಾಯಪೀಠ, “ರಿಟ್ ಅರ್ಜಿಯಲ್ಲಿ ಬ್ಯಾಂಕ್‌ಗಳಿಂದ ಲೆಕ್ಕಪತ್ರ ಹೇಗೆ ಕೇಳುತ್ತೀರಿ?” ಎಂದು ಮಲ್ಯ ಪರ ವಕೀಲರಿಗೆ ಪ್ರಶ್ನೆ ಮಾಡಿತು.

ಅಲ್ಲದೆ, ಪೀಠವು ಮಲ್ಯ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಗಳಿಗೆ ಮತ್ತು ದೇಶದ ಇತರ ನ್ಯಾಯಾಲಯದ ಪ್ರಕ್ರಿಯೆಗಳಿಗೆ ಹಾಜರಾಗಿಲ್ಲದಿರುವುದನ್ನು ಪ್ರಸ್ತಾಪಿಸಿ, “ಇಂತಹ ಪರಿಸ್ಥಿತಿಯಲ್ಲಿ ರಿಟ್ ಸಲ್ಲಿಸುವ ಹಕ್ಕನ್ನು ಹೇಗೆ ಮಂಡಿಸುತ್ತೀರಿ?” ಎಂದು ಪ್ರಶ್ನಿಸಿತು. ಇದಕ್ಕೆ ಮಲ್ಯ ವಕೀಲರು, ಮಲ್ಯ ಅವರು ಲಂಡನ್ ಕೋರ್ಟ್‌ನ ಕಾನೂನು ಪ್ರಕ್ರಿಯೆಗಳಿಗೆ ಒಳಪಟ್ಟಿದ್ದಾರೆ ಎಂದು ಉತ್ತರಿಸಿದರು.

ಬ್ಯಾಂಕ್‌ಗಳ ಪರ ವಾದಿಸಿದ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ, ಮಲ್ಯ ಅವರು ದೇಶ ತೊರೆದು ‘ದೇಶಭ್ರಷ್ಟ’ರಾಗಿದ್ದಾರೆ. ಅವರು ಮುಗ್ಧರಾಗಿದ್ದರೆ ಭಾರತಕ್ಕೆ ಮರಳಿ ನ್ಯಾಯಾಂಗದ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕಿತ್ತು. ಆದರೆ ತಮಗೆ ಬೇಕಾದಾಗ ಮಾತ್ರ ಕೋರ್ಟ್ ಮುಂದೆ ಬರುತ್ತಾರೆ ಎಂದು ಆರೋಪಿಸಿದರು.

ಮುಂದಿನ ನಡೆ:

ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಈ ಕುರಿತು ಆಕ್ಷೇಪಣೆ ಸಲ್ಲಿಸುವಂತೆ ಬ್ಯಾಂಕ್‌ಗಳ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

error: Content is protected !!