ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಲ್ಲಿ ನಡೆದ ಏಷ್ಯಾಕಪ್ 2025 ಫೈನಲ್ ಪಂದ್ಯದಲ್ಲಿ ತಿಲಕ್ ವರ್ಮಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಪಾಕಿಸ್ತಾನವನ್ನು ಐದು ವಿಕೆಟ್‌ಗಳ ಅಂತರದಿಂದ ಸೋಲಿಸಿದೆ. ಗೆಲುವಿನ ನಂತರ ಭಾರತ ತಂಡವು ಪಾಕಿಸ್ತಾನದ ಸಚಿವ ಹಾಗೂ ಏಷ್ಯಾ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಇದರಿಂದ ಪಂದ್ಯಾನಂತರದ ಪ್ರಶಸ್ತಿ ಸಮಾರಂಭ ಗೊಂದಲಮಯ ವಾತಾವರಣವನ್ನು ಪಡೆದುಕೊಂಡಿತು.
ಟ್ರೋಫಿ ನೀಡಲು ನಖ್ವಿ ವೇದಿಕೆಗೆ ಬಂದಾಗ ಟೀಂ ಇಂಡಿಯಾ ಆಟಗಾರರು ಅವರೆಡೆಗೆ ಹೋಗದೇ ದೂರ ನಿಂತು ವಿರೋಧ ವ್ಯಕ್ತಪಡಿಸಿದರು. ನಂತರ ಟ್ರೋಫಿ ಸ್ವೀಕರಿಸದೇ ಸ್ವೀಕರಿಸುವ ರೀತಿಯಲ್ಲೇ ಮಾಡಿ ಮೈದಾನದಲ್ಲೇ ಸಂಭ್ರಮಿಸಿದರು. ಪಂದ್ಯಶ್ರೇಷ್ಠ ಮತ್ತು ಇತರೆ ವೈಯಕ್ತಿಕ ಪ್ರಶಸ್ತಿಗಳನ್ನು ಮಾತ್ರ ಉಳಿದ ಗಣ್ಯರಿಂದ ಭಾರತ ಆಟಗಾರರು ಸ್ವೀಕರಿಸಿದರು.
ಈ ನಿರ್ಧಾರವು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ನೀಡಿದ ನಿರ್ದೇಶನದ ಮೇರೆಗೆ ಕೈಗೊಳ್ಳಲಾಗಿದೆ ಎಂಬ ವರದಿಯಿದೆ. ಏಕೆಂದರೆ ಈ ವರ್ಷದ ಏಪ್ರಿಲ್‌ನಲ್ಲಿ ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಸಾವನ್ನಪ್ಪಿದ್ದರು. ಆ ದಾಳಿಗೆ ಪ್ರತೀಕಾರವಾಗಿ ಭಾರತ “ಆಪರೇಷನ್ ಸಿಂದೂರ” ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳನ್ನು ಗುರಿ ಮಾಡಿತ್ತು. ಇದರಿಂದ ಭಾರತ-ಪಾಕಿಸ್ತಾನ ಸಂಬಂಧಗಳು ಮತ್ತಷ್ಟು ಬಿಗಡಾಯಿಸಿವೆ.
ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಸಾಧಿಸಿದ ಜಯ ಕೇವಲ ಕ್ರಿಕೆಟ್ ಮೈದಾನದಲ್ಲಷ್ಟೇ ಅಲ್ಲ, ರಾಜತಾಂತ್ರಿಕವಾಗಿ ಕೂಡ ಮಹತ್ವ ಪಡೆದುಕೊಂಡಿದೆ. ಟ್ರೋಫಿ ಸ್ವೀಕರಿಸಲು ನಿರಾಕರಿಸುವ ಮೂಲಕ ಭಾರತ ತನ್ನ ಅಸಮಾಧಾನವನ್ನು ತೀವ್ರವಾಗಿ ವ್ಯಕ್ತಪಡಿಸಿದೆ. ಇದರಿಂದ ಕ್ರೀಡಾಂಗಣದಲ್ಲೂ ಎರಡೂ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತೊಮ್ಮೆ ಸ್ಪಷ್ಟವಾಗಿದೆ.