ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ರಿಸ್ಮಸ್ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿವಾದವೊಂದು ಮುನ್ನೆಲೆಗೆ ಬಂದಿದೆ. ಕ್ರಿಶ್ಚಿಯನ್ ಆಡಳಿತದ ಶಾಲೆಗಳಲ್ಲಿ ನೀಡುವ ರಜೆ ವಿವಾದಕ್ಕೆ ಕಾರಣವಾಗಿದ್ದು, 10 ದಿನಗಳ ಕಾಲ ಶಾಲೆಗಳಿಗೆ ನೀಡುವ ರಜೆಯ ವಿರುದ್ಧ ಧರ್ಮ ಸಂಘರ್ಷಕ್ಕೆ ಶ್ರೀ ರಾಮಸೇನೆ ಸಿದ್ದತೆ ನಡೆಸಿದೆ.
ಕಳೆದ ಕೆಲ ವರ್ಷಗಳ ಹಿಂದೆ ರಾಜ್ಯದ ಕೆಲ ಶಾಲೆಗಳಲ್ಲಿ ಕಿಚ್ಚು ಹತ್ತಿಸಿದ್ದ ಹಿಜಾಬ್ ವರ್ಸಸ್ ಕೆಸರಿ ಶಾಲು ವಿವಾದ ಇನ್ನೂ ವಿವಾದವಾಗಿಯೇ ಉಳಿದಿದೆ. ಇದೀಗ ಶಾಲೆಯ ರಜೆ ವಿಚಾರವಾಗಿ ಮತ್ತೊಂದು ವಿವಾದ ಭುಗಿಲೇಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ರಾಜ್ಯದಲ್ಲಿ ಕ್ರಿಶ್ಚಿಯನ್ ಒಡೆತನದ ಶಾಲೆಗಳಲ್ಲಿ ಕ್ರಿಸ್‌ಮಸ್‌ಗೆ ನೀಡುವ 10 ದಿನದ ರಜೆ ವಿವಾದಕ್ಕೆ ಕಾರಣವಾಗಿದೆ. ಸರ್ಕಾರ ನೀಡುವ ರಜೆಯನ್ನು ಮಾತ್ರ ನೀಡಬೇಕು. ಒಂದು ದಿನ ನೀಡುವ ರಜೆಯನ್ನ 10 ದಿನಗಳ ಕಾಲ ನೀಡುವ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಶ್ರೀರಾಮಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ರಜೆಯ ವಿವಾದಕ್ಕೆ ಧರ್ಮ ಸುತ್ತಿಕೊಂಡಿದ್ದು, ದಸರಾಕ್ಕೆ ರಜೆ ನೀಡದೆ ಶಾಲೆ ನಡೆಸಿ ಕ್ರಿಸ್‌ಮಸ್‌ಗೆ 10 ದಿನಗಳ ಕಾಲ ರಜೆ ನೀಡಲಾಗುತ್ತಿದೆ. ಹೆಚ್ಚಾಗಿ ಹಿಂದೂ ವಿಧ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳೇ ಇರುವ ಕ್ರಿಶ್ಚಿಯನ್ ಆಡಳಿತದ ಶಾಲೆಗಳಲ್ಲಿ ದಸರಾಕ್ಕೆ ರಜೆ ನೀಡದೆ, ಕ್ರಿಸ್‌ಮಸ್‌ಗೆ ರಜೆ ನೀಡುವ ಮೂಲಕ ಬಲವಂತವಾಗಿ ಕ್ರಿಶ್ಚಿಯನ್ ಧರ್ಮ ಆಚರಣೆಯನ್ನ ಹಿಂದೂಗಳ ಮೇಲೇರುವ ಪ್ರಯತ್ನವಾಗುತ್ತಿದೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

