ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಡೆಯುತ್ತಿರುವ ಸಿಎಂ ಸಿದ್ದರಾಮಯ್ಯ ಅವರ ಡಿನ್ನರ್ ಮೀಟಿಂಗ್ ಕುರಿತು ಬಿಜೆಪಿ ಹಿರಿಯ ನಾಯಕ ಮತ್ತು ಎಂಎಲ್‌ಸಿ ಸಿ.ಟಿ. ರವಿ ತೀವ್ರ ವ್ಯಂಗ್ಯವಾಡಿದ್ದಾರೆ. “ರಾಜ್ಯದಲ್ಲಿ ಕೊಲೆ, ಸುಲಿಗೆ, ಅತ್ಯಾಚಾರ, ಭ್ರಷ್ಟಾಚಾರ ಮತ್ತು ಅತಿವೃಷ್ಠಿ ಇವೆಲ್ಲವೂ ದಾಖಲೆ ಮಟ್ಟ ತಲುಪಿವೆ. ಇವುಗಳ ಸಂಭ್ರಮಾಚರಣೆಗೆ ಔತಣಕೂಟ ಮಾಡುತ್ತಿದ್ದಾರಾ?” ಎಂದು ಪ್ರಶ್ನೆ ಎತ್ತಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ 80% ದಾಟಿದೆ ಎಂದು ಗುತ್ತಿಗೆದಾರರೇ ಪತ್ರ ಬರೆದಿದ್ದಾರೆ. ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಕರ್ನಾಟಕ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. 10ಕ್ಕೂ ಹೆಚ್ಚು ಜಿಲ್ಲೆಗಳು ಅತಿವೃಷ್ಠಿಯಿಂದ ಹಾನಿಗೊಳಗಾಗಿವೆ. ಇಂತಹ ಸಂದರ್ಭದಲ್ಲಿ ಸಿಎಂ ಔತಣಕೂಟ ಏಕೆ ಆಯೋಜಿಸುತ್ತಿದ್ದಾರೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ, ಎಂದು ರವಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ, ಶಾಸಕರಾದ ವೀರೇಂದ್ರ ಪಪ್ಪಿ ವಿರುದ್ಧ ಇಡೀ ನಡೆಸುತ್ತಿರುವ ತನಿಖೆಯ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಮೆರಿಟ್ ಅಂದ್ರೆ ಅಕ್ರಮ ಹಣ ಸಂಪಾದನೆ. ಬಿಹಾರ ಚುನಾವಣೆಗೆ 300 ಕೋಟಿ ರೂ. ದೇಣಿಗೆ ನೀಡಿದರೆ ಮಂತ್ರಿಯಾಗಬಹುದು ಎಂಬಂತಾಗಿದೆ. ಇದು ಕಾಂಗ್ರೆಸ್‌ನಲ್ಲಿ ರೂಢಿಯಾಗಿದೆ, ಎಂದು ಆರೋಪಿಸಿದರು.
ಕಾಂಗ್ರೆಸ್ ಯಾವ ಕಾಲದಲ್ಲೂ ಕಾಳಸಂತೆಯವರನ್ನೇ ಪ್ರೋತ್ಸಾಹಿಸಿದೆ. ಯಾವುದೇ ಮೂಲದಿಂದ ಹಣ ಮಾಡಿದರೂ, ಕಾಂಗ್ರೆಸ್‌ನಲ್ಲಿ ಸ್ಥಾನ ಸಿಗುತ್ತೆ. 40 ನಾಯಕರ ಟ್ರ್ಯಾಕ್ ರೆಕಾರ್ಡ್ ನೋಡಿದರೆ ಸಾಕು, ಸತ್ಯ ಗೊತ್ತಾಗುತ್ತದೆ, ಎಂದು ವಾಗ್ದಾಳಿ ನಡೆಸಿದರು.