Tuesday, October 14, 2025

ʼವೋಟ್‌ ಚೋರಿʼ ಆರೋಪ ಮಾಡುವ ರಾಹುಲ್‌ ಗಾಂಧಿ ಮಾಲೂರು ಕ್ಷೇತ್ರ ಕುರಿತು ಏಕೆ ಮಾತನಾಡಲಿಲ್ಲ?: ಜೋಶಿ ತಿರುಗೇಟು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ʼವೋಟ್‌ ಚೋರಿʼ ಎಂಬುದು ರಾಹುಲ್‌ ಗಾಂಧಿ ಅವರ ಹೊಸ ಕಾಲ್ಪನಿಕ ಕಥೆಯೇ ಸರಿ ಇದೆ. ಮಾಲೂರು ಕ್ಷೇತ್ರದ ಕಾಂಗ್ರೆಸ್‌ ಶಾಸಕತ್ವವನ್ನು ಹೈಕೋರ್ಟ್‌ ಅನರ್ಹಗೊಳಿಸಿದ್ದಲ್ಲದೆ ಮರು ಮತ ಎಣಿಕೆಗೆ ಆದೇಶಿಸಿದೆ. ವಾಸ್ತವ ಹೀಗಿರುವಾಗ ಈಗ್ಯಾರು ʼವೋಟ್‌ ಚೋರಿ? ಎಂದು ಕಾಂಗ್ರೆಸ್‌ಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದ್ದಾರೆ.

ಕರ್ನಾಟಕದ ಮಾಲೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅತ್ಯಂತ ಕನಿಷ್ಠ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇಲ್ಲಿಯ ಮತದಾನ, ಮತ ಎಣಿಕೆಯಲ್ಲಿ ಲೋಪದೋಷವಾಗಿದೆ. ಹೀಗಾಗಿ ಪರಾಜಿತ ಅಭ್ಯರ್ಥಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ಪೂರಕ ದಾಖಲೆಗಳನ್ನು ಸಲ್ಲಿಸಿದ್ದರು. ಹೈಕೋರ್ಟ್‌ ಇದೀಗ ಕಾಂಗ್ರೆಸ್‌ ಅಭ್ಯರ್ಥಿಯ ಶಾಸಕತ್ವ ಅನರ್ಹಗೊಳಿಸಿ ಮರು ಮತ ಎಣಿಕೆಗೆ ಆದೇಶಿಸಿದೆ. ಈಗೇನು ಹೇಳುತ್ತಾರೆ ಈ ʼವೋಟ್‌ ಚೋರಿʼಯ ಕಥಾ ನಾಯಕರು? ಎಂದು ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ.

ʼವೋಟ್‌ ಚೋರಿʼ ಆರೋಪ ಮಾಡುವ ರಾಹುಲ್‌ ಗಾಂಧಿ ಈಗ ಮಾಲೂರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲಿಲ್ಲ? ಅಲ್ಲಿ ಕಾಂಗ್ರೆಸ್‌ ಪಕ್ಷವೇ ಗೆದ್ದಿದೆ. ಇಲ್ಲಿ ನಡೆದ ಚುನಾವಣಾ ದುಷ್ಕೃತ್ಯದ ಕಾರಣ ಎರಡು ದಿನಗಳ ಹಿಂದಷ್ಟೇ ಹೈಕೋರ್ಟ್‌ ಶಾಸಕತ್ವ ಅನರ್ಹಗೊಳಿಸಿ, ಹೊಸ ಮತ ಎಣಿಕೆಗೆ ಆದೇಶಿಸಲಾಗಿದೆ. ಇನ್ನಾದರೂ ರಾಹುಲ್‌ ಗಾಂಧಿ ಬುದ್ಧಿ ಕಲಿಯಲಿ ಎಂದು ಜೋಶಿ ಚಾಟಿ ಬೀಸಿದ್ದಾರೆ.

error: Content is protected !!