ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮಾತನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ, ರಾಜ್ಯದ ರೈತರಿಗೆ ದ್ರೋಹ ಮಾಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ.
ನಿನ್ನೆ ವಿಧಾನಸಭೆಯಲ್ಲಿ ಉತ್ತರ ಕರ್ನಾಟಕವನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಚರ್ಚೆಯನ್ನು ಆರಂಭಿಸಿದ ಅಶೋಕ್, ಮೇ 8, 2020 ರಂದು ಸಿದ್ದರಾಮಯ್ಯ ಅವರು ಮಾಡಿದ ಟ್ವೀಟ್ ನ್ನು ಉಲ್ಲೇಖಿಸಿದರು – ಆಗ ಸಿಎಂ ವಿರೋಧ ಪಕ್ಷದ ನಾಯಕರಾಗಿದ್ದರು. ಅದರಲ್ಲಿ ಅವರು ರೈತರು ತಮ್ಮ ಬೆಳೆಗಳಿಗೆ ನಿಗದಿತ ಬೆಲೆಗಿಂತ ಕಡಿಮೆ ದರವನ್ನು ಪಡೆಯುತ್ತಿರುವ ಸಮಯದಲ್ಲಿ ಸರ್ಕಾರವು 5,000 ಕೋಟಿ ರೂಪಾಯಿ ನಿಧಿಯನ್ನು ರಚಿಸುವಂತೆ ಕರೆ ನೀಡಿದ್ದರು.
ಇದು ಕೇವಲ ಟ್ವೀಟ್ ಅಲ್ಲ. 2023 ರ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆಯು 5,000 ಕೋಟಿ ರೂಪಾಯಿಗಳ ಆರಂಭಿಕ ನಿಧಿಯೊಂದಿಗೆ ಶಾಶ್ವತ ವಿಪತ್ತು ನಿರ್ವಹಣಾ ನಿಧಿಯನ್ನು ರಚಿಸುವ ಭರವಸೆಯನ್ನು ಸಹ ಒಳಗೊಂಡಿದೆ. ಅದನ್ನು ಸರ್ಕಾರ ರಚಿಸಿದೆಯೇ, ಹಳೆಯ ಮೈಸೂರು ಪ್ರದೇಶಕ್ಕಿಂತ ಉತ್ತರ ಕರ್ನಾಟಕದಲ್ಲಿ ನಷ್ಟ ಹೆಚ್ಚಾಗಿದೆ. ನೀವು 5,000 ಕೋಟಿ ರೂಪಾಯಿ ಹಣ ರೈತರಿಗೆ ಏಕೆ ನೀಡಿಲ್ಲ ಎಂದು ಕೇಳಿದರು.
ಕಬ್ಬಿನ ಬೆಲೆ ನಿಗದಿಮಾಡಿದ್ದು ಕೇಂದ್ರ ಸರ್ಕಾರ ಎಂದ ಅಶೋಕ್, ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳು ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕೆಂದು ಆದೇಶಿಸಿದೆ ಎಂದು ಸದನದಲ್ಲಿ ಗಮನಸೆಳೆದರು.

