ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸುವುದರ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. “ಬ್ಯಾಲೆಟ್ ಪೇಪರ್ ಬಳಸಿದರೆ ಬಿಜೆಪಿ ಏಕೆ ಭಯಪಡುತ್ತಿದೆ?” ಎಂದು ಪ್ರಶ್ನಿಸಿದ್ದಾರೆ.
ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ತೆರಳುವ ವೇಳೆ ಗಿಣಿಗೇರಾ ಹತ್ತಿರದ ಎಂಎಸ್‌ಪಿಎಲ್ ಏರ್‌ಸ್ಟ್ರಿಪ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾವು ಮಾತ್ರವಲ್ಲ, ಅನೇಕ ದೇಶಗಳು ಇನ್ನೂ ಬ್ಯಾಲೆಟ್ ಪೇಪರ್ ಬಳಸಿ ಚುನಾವಣೆ ನಡೆಸುತ್ತಿವೆ. ಹಾಗಾದರೆ ಆ ದೇಶಗಳು ಶಿಲಾಯುಗಕ್ಕೆ ಹಿಂತಿರುಗಿದಂತೆನಾ?” ಎಂದು ಸಿಎಂ ತಿರುಗೇಟು ನೀಡಿದರು. ಇವಿಎಂ ಮತಯಂತ್ರಗಳ ಬಗ್ಗೆ ಜನರಲ್ಲಿ ಅನುಮಾನವಿದ್ದು, ಮತಗಳ್ಳತನ ನಡೆಯುತ್ತಿರುವ ಬಗ್ಗೆ ರಾಹುಲ್ ಗಾಂಧಿ ದೇಶಾದ್ಯಂತ ಹೋರಾಟ ಮಾಡುತ್ತಿರುವುದನ್ನು ಉಲ್ಲೇಖಿಸಿ, “ಅದಕ್ಕಾಗಿಯೇ ನಾವು ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಮುಂದಾಗಿದ್ದೇವೆ” ಎಂದರು.
ಅದೇ ವೇಳೆ ತಮ್ಮ ರಾಜಕೀಯ ಜೀವನದ ಉದಾಹರಣೆಯನ್ನೂ ಸಿಎಂ ಸ್ಮರಿಸಿದರು. “ನಾನು ಕೊಪ್ಪಳದಲ್ಲಿ ಸ್ಪರ್ಧಿಸಿದಾಗ ಕೌಂಟಿಂಗ್‌ನಲ್ಲಿ ದೋಷವಿದೆ ಎಂದು ನಾನು ಆರೋಪಿಸಿದ್ದೆ. ಆದರೆ ಅದು ಬ್ಯಾಲೆಟ್ ಪೇಪರ್ ದೋಷವಲ್ಲ. ಸರ್ಕಾರದ ವಿರುದ್ಧವೂ ನಾನು ಆರೋಪ ಮಾಡಿರಲಿಲ್ಲ. ಕೌಂಟಿಂಗ್ ಸರಿಯಾಗಿ ನಡೆಯದಿದ್ದ ಕಾರಣ ಆ ಸಮಯದಲ್ಲಿ ನಾನು ಅಸಮಾಧಾನ ವ್ಯಕ್ತಪಡಿಸಿದ್ದೆ,” ಎಂದು ಸ್ಪಷ್ಟಪಡಿಸಿದರು.