Sunday, September 28, 2025

ಈ ರೀತಿ ಮಳೆ ಬಂದ್ರೆ ಜನ ಬದುಕೋಕಾಗುತ್ತಾ?: ಇಡೀ ಗ್ರಾಮವನ್ನೇ ತನ್ನ ಒಡಲಲ್ಲಿ ಸೇರಿಸಿಕೊಂಡ ಭೀಮೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಜಲಾಶಯಗಳಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಮಾಡಲಾಗಿದ್ದು, ಇದರ ಪರಿಣಾಮ ರಾಜ್ಯದಲ್ಲಿ ತೀವ್ರ ನೆರೆ ಪರಿಸ್ಥಿತಿ ಉಂಟಾಗಿದೆ. ಕಲಬುರಗಿ ಜಿಲ್ಲೆ, ವಿಶೇಷವಾಗಿ ಸೇಡಂ ಮತ್ತು ಜೇವರ್ಗಿ ತಾಲ್ಲೂಕುಗಳು ಹೆಚ್ಚು ಪ್ರಭಾವಿತಗೊಂಡಿದ್ದು, ಗ್ರಾಮಸ್ಥರು ತಮ್ಮ ಮನೆಗಳಲ್ಲಿ ಸುರಕ್ಷಿತವಾಗಿ ಉಳಿಯಲು ಮೇಲ್ಛಾವಣಿ ಹತ್ತುತ್ತಿದ್ದಾರೆ.

ಸೇಡಂ ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿ ಭೀಮಾ ನದಿ ನೀರು ತೀವ್ರವಾಗಿ ಹರಿಯುತ್ತಿರುವುದರಿಂದ ಗ್ರಾಮಸ್ಥರು ಮನೆಯ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದ್ದಾರೆ. ಸ್ಥಳೀಯರು ತುರ್ತು ನೆರವಿಗಾಗಿ ಅಧಿಕಾರಿಗಳನ್ನು ಮೊರೆಹೋಗುತ್ತಿದ್ದು, ಪರಿಸ್ಥಿತಿಯನ್ನು ತಕ್ಷಣ ಪರಿಹರಿಸುವ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಹೊಸ ಸೇತುವೆ ಮುಳುಗಡೆಗೊಂಡಿದ್ದು, ಬೀದರ್ – ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ ಸಂಚಾರ ಸಂಪೂರ್ಣ ತಡೆಗಟ್ಟಿದೆ. ಭೀಮಾ ನದಿ ರಭಸದಿಂದ ಜಮೀನುಗಳು ಜಲಾವೃತವಾಗಿದ್ದು, ಚಿಮ್ಮನಳ್ಳಿ ಬ್ರಿಡ್ಜ್‌ ಪ್ರದೇಶದಲ್ಲಿ ನೀರು ನಿಂತು, ನದಿ ಪ್ರವಾಹ ಸ್ಥಿತಿ ಉಂಟಾಗಿದ್ದು ತುರ್ತು ಪರಿಹಾರ ಕ್ರಮ ಅಗತ್ಯವಿದೆ.