ಹೊಸದಿಗಂತ ಬೀದರ್
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರತಿಬಂಧಕ ವಿಧೇಯಕ 2025’ ಸಂವಿಧಾನ ವಿರೋಧಿಯಾಗಿದ್ದು, ಇದನ್ನು ಕೂಡಲೇ ಕೈಬಿಡಬೇಕೆಂದು ಮಾಜಿ ಸಚಿವ ಹಾಗೂ ಔರಾದ್ (ಬಿ) ಕ್ಷೇತ್ರದ ಶಾಸಕ ಪ್ರಭು ಬಿ. ಚವ್ಹಾಣ್ ಆಗ್ರಹಿಸಿದ್ದಾರೆ.
ಬುಧವಾರ ಗ್ರಾಮ ಸಂಚಾರದ ಬಳಿಕ ಬಿಜೆಪಿ ಮುಖಂಡರೊಂದಿಗೆ ತಹಸೀಲ್ದಾರ್ ಕಚೇರಿಗೆ ತೆರಳಿದ ಶಾಸಕರು, ಸರ್ಕಾರದ ಉದ್ದೇಶಿತ ಕಾನೂನಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ಮನವಿ ಪತ್ರ ಸಲ್ಲಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಚವ್ಹಾಣ್ ಅವರು, “ದ್ವೇಷ ಭಾಷಣದ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಈ ಕಾಯ್ದೆಯು ಸರ್ಕಾರದ ವಿರುದ್ಧ ಧ್ವನಿ ಎತ್ತುವವರ ಬಾಯಿ ಮುಚ್ಚಿಸುವ ಅಸ್ತ್ರವಾಗಿದೆ,” ಎಂದು ಕಿಡಿಕಾರಿದರು.
ವಿಧೇಯಕದಲ್ಲಿ ದ್ವೇಷ ಭಾಷಣಕ್ಕೆ ನೀಡಿರುವ ವ್ಯಾಖ್ಯಾನವು ಅತ್ಯಂತ ಅಸ್ಪಷ್ಟವಾಗಿದೆ. ಸರ್ಕಾರದ ನೀತಿಗಳ ಟೀಕೆ, ಸಾಮಾಜಿಕ ಚರ್ಚೆ ಅಥವಾ ಸತ್ಯವನ್ನು ಹೇಳುವುದನ್ನೂ ಕೂಡ ‘ದ್ವೇಷ’ ಎಂದು ಪರಿಗಣಿಸುವ ಅಪಾಯವಿದೆ. ಇದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ಅನಿಯಮಿತ ಅಧಿಕಾರ ನೀಡುತ್ತದೆ. ಈ ಕಾಯ್ದೆಯಡಿ ಜಾಮೀನು ರಹಿತ ಬಂಧನಕ್ಕೆ ಅವಕಾಶ ನೀಡಿರುವುದು ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸುವ ತಂತ್ರ ಎಂದು ಅವರು ಆರೋಪಿಸಿದರು.
“ಈ ಕಾನೂನು ಜಾರಿಯಾದರೆ ಪತ್ರಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಸೋಶಿಯಲ್ ಮೀಡಿಯಾ ಬಳಕೆದಾರರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಣ್ಣ ಹಾಸ್ಯ ಅಥವಾ ಟೀಕೆಯನ್ನೂ ದ್ವೇಷ ಎಂದು ಕರೆದು ಬ್ಲಾಕ್ ಮಾಡುವ ಅಧಿಕಾರ ಪೊಲೀಸರಿಗೆ ಸಿಗಲಿದೆ. ಇದು ಪರೋಕ್ಷವಾಗಿ ಕನ್ನಡ ಸಂಘಟನೆಗಳು ಮತ್ತು ವಿರೋಧ ಪಕ್ಷಗಳನ್ನು ದಮನ ಮಾಡುವ ಹುನ್ನಾರ,” ಎಂದು ಶಾಸಕರು ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜೆ, ಮುಖಂಡರಾದ ವಸಂತ ಬಿರಾದಾರ, ಶಿವಾಜಿರಾವ ಪಾಟೀಲ ಮುಂಗನಾಳ, ಖಂಡೋಬಾ ಕಂಗಟೆ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ವಿಧೇಯಕ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಈ ಸಂದರ್ಭದಲ್ಲಿ ಎಚ್ಚರಿಸಲಾಯಿತು.

