Thursday, October 2, 2025

ರಸ್ತೆಯಲ್ಲಿ ಹೋದ್ರೆ ತಾನೆ ಕಷ್ಟ ಗೊತ್ತಾಗೋದು? ಸಿಎಂಗೆ ಬಿಜೆಪಿ ಟಾಂಗ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಎಂ ಸಿದ್ದರಾಮಯ್ಯ ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಕುಳಿತು ವೈಮಾನಿಕ ಸಮೀಕ್ಷೆ ನಡೆಸಿ ಪ್ರವಾಹ ಪರಿಸ್ಥಿತಿ ಹೇಗಿದೆ ಎಂದು ನೋಡಿದ್ದಾರೆ.

ಇದಕ್ಕೆ ಬಿಜೆಪಿ ಟಾಂಗ್‌ ನೀಡಿದೆ. ವಿಮಾನದಲ್ಲಿ ಕುಳಿತು ಸಮೀಕ್ಷೆ ಮಾಡ್ಬೇಡಿ, ರಸ್ತೆಗಿಳಿದರೆ ಮಾತ್ರ ಜನರ ಕಷ್ಟ ಅರ್ಥ ಆಗೋದು? ಜನರೆಲ್ಲ ಸುತ್ತುವರಿಗೆ ಪ್ರಶ್ನೆ ಕೇಳ್ತಾರೆ ಎನ್ನುವ ಭಯನಾ? ಎಂದು ಟಾಂಗ್‌ ನೀಡಿದ್ದಾರೆ.

ಕಲ್ಯಾಣ ಕರ್ನಾಟಕ ಪ್ರದೇಶದ ಪ್ರವಾಹ ಪರಿಸ್ಥಿತಿಯನ್ನು “ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ” ಎಂದು ಪ್ರತಿಪಕ್ಷ ಬಿಜೆಪಿ ಮಂಗಳವಾರ ಆರೋಪಿಸಿದೆ.

ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡುವ ಬದಲು ವೈಮಾನಿಕ ಸಮೀಕ್ಷೆ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ಕಲಬುರಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಹಾಗೂ ಮಹಾರಾಷ್ಟ್ರದ ಉಜನಿ ಮತ್ತು ನೀರಾ ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ಭೀಮಾ ನದಿ ಜಲಾನಯನ ಪ್ರದೇಶದಲ್ಲಿ ಪ್ರವಾಹ ಉಂಟಾಗಿ ಹಾನಿಗೀಡಾಗಿರುವ ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಮಂಗಳವಾರ ವೈಮಾನಿಕ ಸಮೀಕ್ಷೆ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್, ಇದು ಯಾವ ರೀತಿಯ ಸರ್ಕಾರ ಎಂದು ಜನರು ಕೇಳುತ್ತಿದ್ದಾರೆ. ಈ ಸರ್ಕಾರ ಸತ್ತಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.