ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಈ ನಡುವೆ ಜನವರಿಯಲ್ಲಿ ನನಗೆ ಶುಕ್ರದೆಸೆ ಬರುವುದು ಪಕ್ಕಾ ಎನ್ನುವ ಮೂಲಕ ಸಂಪುಟ ಪುನಾರಚನೆಯಲ್ಲಿ ಸಚಿವನಾಗುವ ಇಂಗಿತವನ್ನ ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ವ್ಯಕ್ತಪಡಿಸಿದ್ದಾರೆ.
ಅಥಣಿ ಪಟ್ಟಣದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಅವರು, ಸಂಪುಟ ಪುನರ್ ರಚನೆ ಆಗುವುದು ಮೊದಲೇ ಗೊತ್ತಿತ್ತು.ಶನಿವಾರ ಬೆಳಗಾವಿಯಲ್ಲಿ ಸಿಎಂ ಸಹ ಹೇಳಿದ್ದಾರೆ. ನನಗೆ ಸಚಿವನಾಗುವ ಸಂದರ್ಭ ಬರಲಿ. ಆ ಸಂದರ್ಭದಲ್ಲಿ ನಾನು ಪ್ರತಿಕ್ರಿಯೆ ನೀಡುತ್ತೇನೆ. ನಾವು ಯಾವುದೇ ಅಧಿಕಾರವನ್ನ ಕೇಳಿ ಪಡೆದವನಲ್ಲ. ಭಗವಂತನ ಆಶೀರ್ವಾದ ಹಾಗೂ ಹೈಕಮಾಂಡ್ ಇಚ್ಛೆ ಇದ್ರೆ ಸಚಿವ ಸ್ಥಾನ ನನಗೆ ತಾನಾಗಿಯೇ ಬರುತ್ತದೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ನಾವು ನಿಭಾಯಿಸಲು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಎಲ್ಸಿ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸತೀಶ್ ಜಾರಕಿಹೊಳಿ ನಮ್ಮ ಮುಂದಿನ ಮಾರ್ಗದರ್ಶಕ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ‘ಅವರವರ ವೈಯಕ್ತಿಕ ಅಭಿಪ್ರಾಯ ಹೇಳುವುದಕ್ಕೆ ಯಾವುದೇ ತಪ್ಪಿಲ್ಲ, ಯಾರೇ ಏನೇ ಹೇಳಿದರೂ ನ್ಯಾಷನಲ್ ಪಾರ್ಟಿಗಳು ಅವರು ಅಂತಿಮ ತೀರ್ಮಾನ ಮಾಡುತ್ತಾರೆ. ಯಾರ ನೇತೃತ್ವದಲ್ಲಿ, ಯಾರು ಸಿಎಂ ಎಂಬುದು ಅಂತಿಮವಾಗಿ ಹೈಕಮಾಂಡ್ನಿಂದ ಆಗುತ್ತೆ, ತೀರ್ಮಾನ ಮಾಡುವವರು ಅವರೇ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ’ ಎಂದು ಸವದಿ ಪ್ರತಿಕ್ರಿಯಿಸಿದ್ದಾರೆ.

