ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಜಿಕ ಜಾಲತಾಣಗಳಲ್ಲಿ ಎದುರಾಗುತ್ತಿರುವ ಕೆಟ್ಟ ಕಾಮೆಂಟ್‌ಗಳು ಮತ್ತು ಟ್ರೋಲ್‌ಗಳ ವಿರುದ್ಧ ದೂರು ದಾಖಲಿಸಿರುವ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸಕ್ರಿಯರಾಗಿರುವ ಅವರು, ಇನ್‌ಸ್ಟಾಗ್ರಾಂನಲ್ಲಿ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.
“ಇತ್ತೀಚೆಗೆ ಮಹಿಳೆಯರನ್ನು ಮೀಮ್ಸ್‌ಗಳ ಮೂಲಕ ಟ್ರೋಲ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಮಹಿಳೆ ತುಂಬಾ ಶಕ್ತಿಶಾಲಿ” ಎಂಬ ಸಾಲುಗಳೊಂದಿಗೆ, ಮಹಿಳೆಯರು ಜೀವನದ ವಿವಿಧ ಹಂತಗಳಲ್ಲಿ ಎದುರಿಸುವ ಸವಾಲುಗಳನ್ನು ತೋರಿಸುವ ವಿಡಿಯೋವನ್ನು ಅವರು ಸ್ಟೋರಿ ಮೂಲಕ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಕಷ್ಟು ಗಮನ ಸೆಳೆಯುತ್ತಿದ್ದು, ಮಹಿಳೆಯರ ಮೇಲಿನ ಟ್ರೋಲಿಂಗ್‌ಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಾಗಿದೆ.
ಇತ್ತೀಚೆಗೆ ಕಿಚ್ಚ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವಿನ ಫ್ಯಾನ್ಸ್‌ವಾರ್ ತೀವ್ರಗೊಂಡಿದ್ದು, ಅದರ ಪರಿಣಾಮವಾಗಿ ಕುಟುಂಬ ಸದಸ್ಯರನ್ನೂ ಟಾರ್ಗೆಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಒಂದು ಕಡೆ ವಿಜಯಲಕ್ಷ್ಮಿ ಅವರ ಮೇಲೆ ಅವಹೇಳನಕಾರಿ ಕಾಮೆಂಟ್‌ಗಳು ಬಂದಿದ್ದರೆ, ಇನ್ನೊಂದು ಕಡೆ ಸುದೀಪ್ ಪುತ್ರಿಗೂ ಅಸಭ್ಯ ಕಾಮೆಂಟ್‌ಗಳು ಬಂದಿವೆ.
ಈ ಹಿನ್ನೆಲೆ, ‘ಮಾರ್ಕ್’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುದೀಪ್, ಮಗಳಿಗೆ ಸಂಬಂಧಿಸಿದ ಟ್ರೋಲ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅದಾದ ಕೆಲವೇ ಹೊತ್ತಿನಲ್ಲಿ ವಿಜಯಲಕ್ಷ್ಮಿ ಹಂಚಿಕೊಂಡ ಈ ಪೋಸ್ಟ್, ಮಹಿಳೆಯರ ಗೌರವ ಮತ್ತು ಶಕ್ತಿಯ ಬಗ್ಗೆ ಸಮಾಜಕ್ಕೆ ಸಂದೇಶ ನೀಡಿದಂತೆ ಕಾಣುತ್ತಿದೆ.

