ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಿ ಮುಂಬೈಯ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಉತ್ತಮ ಆರಂಭ ಪಡೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಟೀಂ ಇಂಡಿಯಾ ಪರ ಆರಂಭಿಕರಾದ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಶಾಂತ ಮತ್ತು ದೃಢ ಬ್ಯಾಟಿಂಗ್ ಮೂಲಕ ತಂಡಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
ಇವರಿಬ್ಬರು ಮೊದಲ ವಿಕೆಟ್‌ಗಾಗಿ 104 ರನ್‌ಗಳ ಅಮೂಲ್ಯ ಜೊತೆಯಾಟ ನೀಡಿದರು. ಅರ್ಧಶತಕದ ಅಂಚಿನಲ್ಲಿ ಎಡವಿದ ಸ್ಮೃತಿ ಮಂಧಾನ 45 ರನ್‌ಗಳಿಗೆ ಔಟಾದರೆ, ಶಫಾಲಿ ವರ್ಮಾ ಅದ್ಭುತ ಫಾರ್ಮ್‌ನಲ್ಲಿದ್ದು, 49 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರ್ಣಗೊಳಿಸಿದರು. ಮೂರೂ ವರ್ಷಗಳ ಬಳಿಕ ಶಫಾಲಿ ಏಕದಿನ ಕ್ರಿಕೆಟ್‌ನಲ್ಲಿ ಅರ್ಧಶತಕದ ಗಡಿ ದಾಟಿರುವುದು ವಿಶೇಷವಾಗಿ ಗಮನ ಸೆಳೆಯಿತು.
ಪ್ರತೀಕಾ ರಾವಲ್ ಗಾಯದಿಂದ ವಿಶ್ವಕಪ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಶಫಾಲಿಗೆ ತಂಡದಲ್ಲಿ ಅವಕಾಶ ದೊರೆತಿದ್ದು, ಈ ಅವಕಾಶವನ್ನು ಅವರು ಅತ್ಯುತ್ತಮವಾಗಿ ಉಪಯೋಗಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ಕೇವಲ ಒಂದಂಕಿಗೆ ಔಟಾದ ಶಫಾಲಿ, ಫೈನಲ್‌ನಲ್ಲಿ ಹೊಸ ಆತ್ಮವಿಶ್ವಾಸದೊಂದಿಗೆ ಮಿಂಚಿದ್ದಾರೆ.
ಬಿಸಿಸಿಐ ಮಹಿಳಾ ವಿಭಾಗ ಶಫಾಲಿಯ ಈ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದು, “ಅದ್ಭುತ ಅರ್ಧಶತಕ – ಶಫಾಲಿ ವರ್ಮಾ ಇಸ್ ಬ್ಯಾಕ್!” ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.

