ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ಸಂಭ್ರಮ ಹಾಗೂ ಭಕ್ತಿಯಿಂದ ರಥೋತ್ಸವ ನೆರವೇರಿತು.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವ ಮುಗಿದ ನಾಲ್ಕು ದಿನಗಳ ಹಿನ್ನೆಲೆಯಲ್ಲಿ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ರಾಜವಂಶಸ್ಥ ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕುಟುಂಬದವರೊಂದಿಗೆ ಪೂಜೆ ಸಲ್ಲಿಸಿದರು.
ಈ ವೇಳೆ ರಥ ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು ರಥೋತ್ಸವದಲ್ಲಿ ಪೊಲೀಸ್ ಬ್ಯಾಂಡ್ ಹಾಗೂ ಸಿಡಿಮದ್ದುಗಳನ್ನು ಸಿಡಿಸಲಾಯಿತು.
ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಸೇರಿದಂತೆ ತಮಿಳುನಾಡು, ಕೇರಳ ಆಂಧ್ರಪ್ರದೇಶಗಳಿಂದ ಸಾವಿರಾರು ಭಕ್ತಾದಿಗಳು ರಥೋತ್ಸವಕ್ಕೆ ಸಾಕ್ಷಿಯಾದರು. ಬಳಿಕ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಸಕಾಲಕ್ಕೆ ಮಳೆ ಬೆಳೆ ಬಂದು ರೈತಾಪಿ ವರ್ಗದ ಜನರು ಉತ್ತಮ ಬೆಳೆ ಬೆಳೆಯಲಿ ಹಾಗೂ ರಾಜ್ಯದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಗಿದೆ ಎಂದರು. ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಪ್ರತಿ ವರ್ಷದಂತೆ ಈ ವರ್ಷವೂ ಸಹ ತಾಯಿ ಚಾಮುಂಡೇಶ್ವರಿಗೆ ರಥೋತ್ಸವದ ಮುಖಾಂತರ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.