ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಕಾಂತಾರ: ಚಾಪ್ಟರ್ 1’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು, ಈಗಾಗಲೇ ತೆಲುಗಿನ ನಟರಾದ ಪ್ರಭಾಸ್, ಜೂ ಎನ್ಟಿಆರ್, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸೇರಿದಂತೆ ಇನ್ನೂ ಕೆಲವರು ಸಿನಿಮಾ ನೋಡಿ ಬಹುವಾಗಿ ಕೊಂಡಾಡಿದ್ದಾರೆ. ಇದೀಗ ಕನ್ನಡದ ಮತ್ತೊಬ್ಬ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಯಶ್ ತಮ್ಮ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ವೀಕ್ಷಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸುವ ಸಿನಿಮಾ. ರಿಷಬ್ ಶೆಟ್ಟಿಯವರೇ, ನಿಮ್ಮ ದೃಢನಿಶ್ಚಯ, ದೃಢತೆ ಮತ್ತು ಸಂಪೂರ್ಣ ಶ್ರದ್ಧೆ ಸಿನಿಮಾದ ಪ್ರತಿ ಚೌಕಟ್ಟಿನಲ್ಲೂ ಸ್ಪಷ್ಟವಾಗಿ ಗೋಚರಿಸುತ್ತದೆ. ಬರಹಗಾರ, ನಿರ್ದೇಶಕ ಮತ್ತು ನಟನಾಗಿ, ನಿಮ್ಮ ದೃಷ್ಟಿಕೋನವು ಪರದೆಯ ಮೇಲೆ ನಿಜವಾಗಿಯೂ ತಲ್ಲೀನಗೊಳಿಸುವ ಅನುಭವವಾಗಿ ರೂಪಾಂತರಗೊಂಡಿದೆ’ ಎಂದಿದ್ದಾರೆ ಯಶ್.
ನಿರ್ಮಾಪಕ ವಿಜಯ್ ದೇವರಕೊಂಡಗೂ ಶುಭಾಶಯ ತಿಳಿಸಿರುವ ಯಶ್, ‘ನಿಮ್ಮ ಸ್ಪಷ್ಟತೆ, ನಿರ್ಭೀತಿಯಿಂದ ರಿಷಬ್ ಅವರ ಯೋಜನೆಗೆ ಬೆಂಬಲಿಸಿದ ರೀತಿ, ಚಿತ್ರರಂಗದಲ್ಲಿ ಇರುವ ಮಾದರಿಗಳನ್ನು ಮುರಿದು ಅವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ದಿದೆ’ ಎಂದಿದ್ದಾರೆ. ‘ರುಕ್ಮಿಣಿ ವಸಂತ್ ಮತ್ತು ಗುಲ್ಷನ್ ದೇವಯ್ಯ ಅವರುಗಳು ಅದ್ಭುತವಾದ ಪ್ರದರ್ಶನವನ್ನು ಸಿನಿಮಾನಲ್ಲಿ ನೀಡಿದ್ದಾರೆ’ ಎಂದಿದ್ದಾರೆ.
ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಕ್ಯಾಮೆರಾ, ಜಯರಾಂ, ಪ್ರಕಾಶ್ ತುಮ್ಮಿನಾಡ್, ಪ್ರಮೋದ್ ಶೆಟ್ಟಿ ಅವರ ನಟನೆಯನ್ನು ಹೊಗಳಿರುವ ಯಶ್, ಅಗಲಿದ ನಟ ರಾಕೇಶ್ ಪೂಜಾರಿಯ ನಟನೆಯನ್ನೂ ಸಹ ಮೆಚ್ಚಿಕೊಂಡಿದ್ದಾರೆ. ಅಂತಿಮವಾಗಿ ‘ನೀವೆಲ್ಲರೂ ಸೇರಿ ಒಂದು ಅದ್ಭುತವಾದ ಸಿನಿಮಾ ಕಟ್ಟಿಕೊಟ್ಟಿದ್ದೀರಿ’ ಎಂದಿದ್ದಾರೆ.
ನಟಿ ರಾಧಿಕಾ ಪಂಡಿತ್ ಸಹ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದು, ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿದ ಬಳಿಕ ‘ಅತ್ಯದ್ಭುತ’ ಎಂಬ ಪದವಷ್ಟೆ ನನ್ನ ತಲೆಗೆ ಹೊಳೆಯುತ್ತಿದೆ. ರಿಷಬ್ ಶೆಟ್ಟಿ ನೀವು ಅದ್ಭುತ, ಅತ್ಯದ್ಭುತವಾದ ಕೆಲಸವನ್ನು ನೀವು ಮಾಡಿದ್ದೀರಿ. ಹೊಂಬಾಳೆ ಹಾಗೂ ನೀವು (ವಿಜಯ್ ಕಿರಗಂದೂರು) ಹೆಮ್ಮೆ ಪಡುವಂಥಹಾ ಮತ್ತೊಂದು ಅದ್ಭುತ ಪ್ರಾಜೆಕ್ಟ್ ಇದಾಗಿದೆ. ರುಕ್ಮಿಣಿ ವಸಂತ್ ನೀವು ಬಹಳ ಸುಂದರವಾಗಿ ಕಾಣುತ್ತೀರಿ ಮತ್ತು ಅಷ್ಟೇ ಅದ್ಭುತವಾದ ಪ್ರದರ್ಶನವನ್ನು ನೀವು ನೀಡಿದ್ದೀರಿ. ಅಜನೀಶ್ ಅವರ ಸಂಗೀತ ಮತ್ತು ಅರವಿಂದ್ ಕಶ್ಯಪ್ ಅವರ ಕ್ಯಾಮೆರಾ ಕೆಲಸ ಅದ್ಭುತವಾಗಿದೆ. ಪ್ರಗತಿ ಶೆಟ್ಟಿ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು’ ಎಂದಿದ್ದಾರೆ ರಾಧಿಕಾ.