ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ರಜನಿಕಾಂತ್ ಅವರು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹುಟ್ಟುಹಬ್ಬವು ಅವರಿಗೆ ಮತ್ತಷ್ಟು ವಿಶೇಷವಾಗಿದೆ, ಏಕೆಂದರೆ ಅವರು ಸದ್ಯ ತಮ್ಮ ಬಹುನಿರೀಕ್ಷಿತ ‘ಜೈಲರ್-2’ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.
ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ, ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಸೆಟ್‌ನಲ್ಲಿಯೇ ಇಡೀ ಚಿತ್ರತಂಡವು ತಲೈವಾ ಅವರ ಹುಟ್ಟುಹಬ್ಬವನ್ನು ಸಂಭ್ರಮಿಸಿದೆ. ಸೆಟ್‌ನಲ್ಲಿ ಕೇಕ್ ಕತ್ತರಿಸುವ ಮೂಲಕ ಸೂಪರ್‌ಸ್ಟಾರ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ, ರಜನಿಕಾಂತ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 50 ವರ್ಷ ಪೂರೈಸಿರುವುದು ಅಭಿಮಾನಿಗಳ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. 1975ರಲ್ಲಿ ತೆರೆಕಂಡ ಕೆ. ಬಾಲಚಂದರ್ ಅವರ ನಿರ್ದೇಶನದ ತಮಿಳು ಚಿತ್ರ ‘ಅಪೂರ್ವ ರಾಗಂಗಳ್’ ಮೂಲಕ ರಂಗಭೂಮಿಗೆ ಕಾಲಿಟ್ಟ ರಜನಿಕಾಂತ್, ಇದುವರೆಗೆ 170ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ, ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ.
ತಮಿಳು ಮಾತ್ರವಲ್ಲದೆ, ಕನ್ನಡ, ತೆಲುಗು, ಹಿಂದಿ, ಮರಾಠಿ, ಬೆಂಗಾಲಿ ಮತ್ತು ಮಲಯಾಳಂ ಸೇರಿದಂತೆ ಬಹುಭಾಷಾ ಸಿನಿಮಾರಂಗದಲ್ಲಿ ಅವರು ತಮ್ಮ ವಿಶೇಷ ಅಭಿನಯದ ಮೂಲಕ ಖ್ಯಾತಿ ಗಳಿಸಿದ್ದಾರೆ.
ತಮ್ಮ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷಗೊಳಿಸಲು, ರಜನಿಕಾಂತ್ ಅವರು ನಟಿಸಿ, ನಿರ್ಮಿಸಿದ ಸೂಪರ್ ಹಿಟ್ ಸಿನಿಮಾ ‘ಪಡೆಯಪ್ಪ’ ಅನ್ನು ಮರು-ಬಿಡುಗಡೆ ಮಾಡಲಾಗಿದೆ. ಈ ಮೂಲಕ ತಲೈವಾ ತಮ್ಮ ಅಭಿಮಾನಿಗಳಿಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

