ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ತಮ್ಮ ಚಿತ್ರಗಳ ಹೊರತಾಗಿ ಇತರೆ ಮನರಂಜನಾ ಕಂಟೆಂಟ್‌ಗಳ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸುವುದನ್ನು ತಪ್ಪಿಸಿಕೊಳ್ಳುವ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ, ಈ ಬಾರಿ ಯೂಟ್ಯೂಬ್ ಜಗತ್ತಿನತ್ತ ಗಮನ ಹರಿಸಿದ್ದಾರೆ. ಭಾರತದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ಆಶಿಶ್ ಚಂಚಲಾನಿ ಅವರ ಹೊಸ ವೆಬ್‌ಸೀರೀಸ್ ‘ಏಕಾಕಿ’ ವೀಕ್ಷಿಸಿದ ರಾಜಮೌಳಿ, ಸಾಮಾಜಿಕ ಜಾಲತಾಣದ ಮೂಲಕ ಅದಕ್ಕೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಆಶಿಶ್ ಚಂಚಲಾನಿ ಬರವಣಿಗೆ, ನಿರ್ಮಾಣ ಮತ್ತು ಅಭಿನಯದೊಂದಿಗೆ ಬಂದಿರುವ ‘ಏಕಾಕಿ’ ಸೀರೀಸ್‌ನ ಕಥಾವಸ್ತು ಹಾಗೂ ನಿರೂಪಣಾ ಶೈಲಿ ರಾಜಮೌಳಿಯನ್ನು ವಿಶೇಷವಾಗಿ ಆಕರ್ಷಿಸಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ‘ಹಾರರ್ ಶೈಲಿಯಿಂದ ಸೈ-ಫೈ ಕಡೆಗೆ ಸಾಗುವ ಕಥೆಯ ತಿರುವು ಅತ್ಯಂತ ಚಾತುರ್ಯದಿಂದ ಮೂಡಿಬಂದಿದೆ ಎಂದು ಶ್ಲಾಘಿಸಿದ್ದಾರೆ. ಈ ಪ್ರಯತ್ನ ಭರವಸೆಯಾಗಿದೆ ಎಂದು ಹೇಳಿ, ಆಶಿಶ್‌ಗೆ ಶುಭ ಹಾರೈಸಿದ್ದಾರೆ.
ರಾಜಮೌಳಿ ಅವರ ಈ ಮೆಚ್ಚುಗೆ ಆಶಿಶ್‌ಗೆ ದೊಡ್ಡ ಗೌರವವಾಗಿ ಪರಿಣಮಿಸಿದೆ. ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಆಶಿಶ್, ಜಗದ್ವಿಖ್ಯಾತ ನಿರ್ದೇಶಕರಿಂದ ಬಂದ ಈ ಮಾತುಗಳು ತಮ್ಮ ಜೀವನದ ಅತಿದೊಡ್ಡ ಸಾಧನೆ ಎಂದು ಭಾವುಕರಾಗಿ ಬರೆದಿದ್ದಾರೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ‘ವಾರಣಾಸಿ’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ರಾಜಮೌಳಿ ಮತ್ತು ಆಶಿಶ್ ಭೇಟಿಯಾಗಿದ್ದರು. ಆ ಭೇಟಿಯ ನಂತರ ಇದೀಗ ಬಂದಿರುವ ಈ ಮೆಚ್ಚುಗೆ, ಡಿಜಿಟಲ್ ಕಂಟೆಂಟ್ ಮತ್ತು ಸಿನಿಮಾ ನಡುವಿನ ಅಂತರ ಕಡಿಮೆಯಾಗುತ್ತಿರುವುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ.

