ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಟರ್‌ನೆಟ್‌ನಲ್ಲಿ ಯಾವಾಗಲಾದರೂ ಏನಾದರೂ ಒಂದು ವಿಷಯಗಳು ವೈರಲ್ ಆಗುತ್ತವೆ. ಈ ಬಾರಿ ಅಂತಹುದೇ ಒಂದು ವಿಡಿಯೋ ವೈರಲ್ ಆಗ್ತಿದೆ, ಆದರೆ ಈ ಸಲ ಫುಡ್ ಬಗ್ಗೆ ಅಲ್ಲ, ಅದರೊಂದಿಗೆ ಬರುವ ಪ್ಯಾಕೇಜಿಂಗ್ ಬಗ್ಗೆ!
ಹೌದು! ನೀವು ಸಹ Zepto ಅಥವಾ Blinkit ಮೂಲಕ ಆರ್ಡರ್ ಮಾಡಿದ ನಂತರ ಅದರಲ್ಲಿ ಬಂದಿರೋ ಪೇಪರ್ ಬ್ಯಾಗ್‌ಗಳ ಕಲೆಕ್ಟ್ ಮಾಡ್ತೀರಾ ಅಲ್ವ? ‘ಇದನ್ನೆಲ್ಲ ಏನು ಮಾಡೋದು?’ ಅಂತ ಯೋಚನೆ ಮಾಡ್ತಿರೋರು ನೀವು ಒಬ್ಬರೇ ಅಲ್ಲ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ, ಅಲ್ಲಿ ಜನರು ಈ ಬ್ಯಾಗ್‌ಗಳನ್ನು ಡಸ್ಟ್‌ಬಿನ್‌ಗಳಂತೆ ಬಳಸುತ್ತಿರುವುದನ್ನು ತೋರಿಸಲಾಗಿದೆ. ವಿಡಿಯೋದಲ್ಲಿ ಒಬ್ಬ ಬೆಂಗಳೂರಿನ ಯುವಕ ಈ ಬ್ಯಾಗ್‌ನಲ್ಲಿ ಉಳಿದ ಆಹಾರ ಹಾಗೂ ಕಸವನ್ನು ಹಾಕುತ್ತಿರುವುದು ನೋಡಬಹುದು. ವಿಡಿಯೋದಲ್ಲಿ “ಈ Zepto ಮತ್ತು Blinkit ನವರು ನನಗೆ ಡಸ್ಟ್‌ಬಿನ್ ಖರೀದಿಸಲು ಬಿಡಲ್ಲ!” ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ. ಆಸಕ್ತಿಕರ ಅಂಶ ಏನೆಂದರೆ Zepto ಕಂಪನಿ ಸ್ವತಃ ಈ ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದು, “ಭಾಯಿ, ಡಸ್ಟ್‌ಬಿನ್ ಕೂಡ ನಮ್ಮ ಹತ್ತಿರ ಸಿಗುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇದಾದ ಬಳಿಕ Swiggy Instamart ಸಹ ಪ್ರತಿಕ್ರಿಯೆ ನೀಡಿದ್ದು, “ಹುಮೇ ಕೈಸೇ ಭೂಲ್ ಗಯೇ?” ಎಂದು ಬರೆದು ಸಂಭಾಷಣೆಯನ್ನು ಇನ್ನಷ್ಟು ರಸದೌತಣವನ್ನಾಗಿ ಮಾಡಿದೆ.
ಸಾಮಾಜಿಕ ಮಾಧ್ಯಮ ಬಳಕೆದಾರರೂ ತಮ್ಮ ಅನುಭವ ಹಂಚಿಕೊಂಡಿದ್ದು, “ನಾನೇ ಒಬ್ಬಳೇ ಅಂತಾ ಭಾವಿಸಿದ್ದೆ” ಎಂದರೆ, ಇನ್ನೊಬ್ಬರು “ಸಾಮಾನುಗಿಂತ ಬ್ಯಾಗ್‌ಗಾಗಿ ಆರ್ಡರ್ ಮಾಡ್ತೀನಿ” ಎಂದು ಕಾಮೆಂಟ್ ಮಾಡಿದರು. ಇನ್ನೊಬ್ಬ ಬಳಕೆದಾರ ಹಾಸ್ಯವಾಗಿ “Zepto Blinkit Swiggy ಅವರೇ, ಈ ಸ್ಕೀಮ್ ಪಬ್ಲಿಕ್ ಮಾಡ್ಬೇಡಿ!” ಎಂದು ಬರೆದಿದ್ದಾರೆ.

