Saturday, October 25, 2025

ಬೆಟ್ಟಿಂಗ್ ಆ್ಯಪ್‌ ಪ್ರಚಾರ: ಇಡಿಯಿಂದ ವಿಚಾರಣೆ! ಈ ಬಗ್ಗೆ ವಿಜಯ್ ದೇವರಕೊಂಡ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಕ್ರಮ ಬೆಟ್ಟಿಂಗ್ ಆ್ಯಪ್‌ಗಳ ಪ್ರಚಾರದ ಆರೋಪದ ಮೇಲೆ ನಟ ವಿಜಯ್ ದೇವರಕೊಂಡ ಅವರನ್ನು ಇನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇಡಿ) ವಿಚಾರಣೆ ನಡೆಸಿದ್ದು, ಅವರು ಸ್ಪಷ್ಟನೆ ನೀಡಿದ್ದಾರೆ. ಬುಧವಾರ ಬೆಳಿಗ್ಗೆ ಅವರು ಇಡಿ ಕಚೇರಿಗೆ ಹಾಜರಾಗಿದ್ದು, ಸಂಬಂಧಿತ ದಾಖಲೆಗಳೊಂದಿಗೆ ತಮ್ಮ ಬಗೆಯ ಸಮರ್ಥನೆ ನೀಡಿದ್ದಾರೆ.

ವಿಚಾರಣೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ವಿಜಯ್ ದೇವರಕೊಂಡ, ತಾವು ಪ್ರಚಾರ ಮಾಡಿದ ಎ23 ಆ್ಯಪ್ ಯಾವುದೇ ಅಕ್ರಮ ಬೆಟ್ಟಿಂಗ್ ಆ್ಯಪ್ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. “ನಾನು ಪ್ರಚಾರ ಮಾಡಿದ್ದು ಕಾನೂನುಬದ್ಧವಾದ ಗೇಮಿಂಗ್ ಆ್ಯಪ್‌. ಇದು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಕ್ರಿಕೆಟ್ ಹಾಗೂ ವಾಲಿಬಾಲ್ ಟೂರ್ನಿಗಳಿಗೆ ಪ್ರಾಯೋಜಕತ್ವ ನೀಡುತ್ತಿದೆ,” ಎಂದು ಅವರು ಹೇಳಿದರು.

ತಮ್ಮ ಹೆಸರು ಈ ಪ್ರಕರಣದಲ್ಲಿ ಏಕೆ ಬಂತು ಎಂಬುದು ಅವರಿಗೂ ಅರ್ಥವಾಗಿಲ್ಲ ಎಂದು ಆಶ್ಚರ್ಯ ಪಟ್ಟುಕೊಂಡಿರುವುದಾಗಿ ತಿಳಿಸಿದ್ದಾರೆ. ಇಡಿ ಅಧಿಕಾರಿಗಳು ಕೇಳಿದ ಬ್ಯಾಂಕ್ ಖಾತೆಗಳ ವಿವರ, ವಹಿವಾಟು ದಾಖಲೆಗಳನ್ನೂ ಅವರು ಸಲ್ಲಿಸಿದ್ದಾರೆ. “ನಾನು ನೀಡಿದ ಎಲ್ಲಾ ಮಾಹಿತಿಯಿಂದ ಇಡಿ ಅಧಿಕಾರಿಗಳು ತೃಪ್ತರಾಗಿದ್ದಾರೆ. ದೇಶದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸಲು ನ್ಯಾಯಾಲಯ ಮತ್ತು ಸರ್ಕಾರಗಳಿವೆ,” ಎಂದು ವಿಜಯ್ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ವಿಜಯ್ ದೇವರಕೊಂಡ ಜೊತೆ ಪ್ರಕಾಶ್ ರಾಜ್, ರಾಣಾ, ಮಂಚು ಲಕ್ಷ್ಮಿ ಸೇರಿದಂತೆ ಹಲವು ಸೆಲೆಬ್ರಿಟಿಗಳ ಹೆಸರುಗಳು ಕೇಳಿಬಂದಿವೆ. ಈ ಪ್ರಕರಣ ಇಡಿಯ ವಶದಲ್ಲಿದೆ. ಇಡಿ ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ತಿಂಗಳು 30 ರಂದು ಪ್ರಕಾಶ್ ರಾಜ್ ಅವರನ್ನು ವಿಚಾರಣೆ ನಡೆಸಲಾಗಿದೆ. ಆಗಸ್ಟ್ 11 ರಂದು ರಾಣಾ, ಆಗಸ್ಟ್ 13 ರಂದು ಮಂಚು ಲಕ್ಷ್ಮಿ ವಿಚಾರಣೆಗೆ ಹಾಜರಾಗಲಿದ್ದಾರೆ.

error: Content is protected !!