ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಂಸದ ಸುಧಾಕರ್ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಚುನಾವಣೆ ಸಮಯದಲ್ಲಿ ಮಾದಾವರ ಬಳಿ 4.8 ಕೋಟಿ ರೂಪಾಯಿ ನಗದು ಪತ್ತೆಯಾದ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಈ ಹಣ ಸಂಸದ ಡಾ. ಸುಧಾಕರ್ ಅವರದ್ದೇ ಎಂದು ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿಗಳ ದೂರು ಆಧರಿಸಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಯಿತು.
ಪ್ರಕರಣವನ್ನು ರದ್ದುಪಡಿಸಬೇಕು ಎಂದು ಡಾ. ಸುಧಾಕರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ. ಅರುಣ್ ಪೀಠ ಅಂತಿಮವಾಗಿ ಎಫ್‌ಐಆರ್ ರದ್ದುಪಡಿಸುವ ಆದೇಶ ಹೊರಡಿಸಿದೆ. ಅರ್ಜಿಯನ್ನು ಪರಿಶೀಲಿಸಿದ ಹೈಕೋರ್ಟ್, ಪ್ರಾಥಮಿಕ ಸಾಕ್ಷ್ಯಾಧಾರಗಳ ಕೊರತೆ ಮತ್ತು ಕಾನೂನು ಪ್ರಕ್ರಿಯೆಯ ಅಸಂಗತತೆಗಳನ್ನು ಉಲ್ಲೇಖಿಸಿ ಎಫ್‌ಐಆರ್‌ನ್ನು ರದ್ದುಪಡಿಸಿದೆ. ಇದರಿಂದಾಗಿ ಸಂಸದ ಡಾ. ಸುಧಾಕರ್‌ಗೆ ತಾತ್ಕಾಲಿಕ ದೊಡ್ಡ ಶಾಂತಿ ಸಿಕ್ಕಂತಾಗಿದೆ.