June 18, 2026
Thursday, June 18, 2026
spot_img

ಕೇರಳದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕಿಗೆ 18 ಜನರು ಬಲಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾದಿಂದ (ನೇಗೇರಿಯಾ ಫೌಲೆರಿ) ಉಂಟಾಗುವ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ರೋಗದ ಭೀತಿ ಹೆಚ್ಚುತ್ತಿದ್ದು, ತಿರುವನಂತಪುರಂನ 17 ವರ್ಷದ ಬಾಲಕ ಈ ಸೋಂಕು ದೃಢಪಟ್ಟಿದ್ದಾರೆ.

ಆತ ಅಕ್ಕುಲಂ ಟೂರಿಸ್ಟ್ ವಿಲೇಜ್‌ನ ಕೊಳದಲ್ಲಿ ಈಜಿದ್ದಾಗ ಸೋಂಕಿಗೆ ಒಳಗಾದನೆಂದು ತಿಳಿದುಬಂದಿದೆ. ಈ ವರ್ಷ ಕೇರಳದಲ್ಲಿ 67 ಪ್ರಕರಣಗಳು ವರದಿಯಾಗಿದ್ದು, 18 ಜನರು ಸಾವನ್ನಪ್ಪಿದ್ದಾರೆ.

ನೇಗೇರಿಯಾ ಫೌಲೆರಿ ಎಂಬ ಸೂಕ್ಷ್ಮಜೀವಿಯಿಂದ ಹರಡುವ ಈ ರೋಗವು ಮೆದುಳಿನ ಕೋಶಗಳನ್ನು ತಿನ್ನುತ್ತದೆ, ಇದರಿಂದಾಗಿ ಇದನ್ನು “ಮೆದುಳು ತಿನ್ನುವ ಅಮೀಬಾ” ಎಂದು ಕರೆಯಲಾಗುತ್ತದೆ. ಈ ಸೋಂಕು ಕಲುಷಿತ, ಬೆಚ್ಚಗಿನ ನೀರಿನ ಕೊಳ, ನದಿ, ಸರೋವರ, ಕಾಲುವೆ, ಅಥವಾ ಸ್ವಚ್ಛಗೊಳಿಸದ ಈಜುಕೊಳಗಳಿಂದ ಮೂಗಿನ ಮೂಲಕ ಮೆದುಳಿಗೆ ತಲುಪುತ್ತದೆ.

ಲಕ್ಷಣಗಳು
ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ತೀವ್ರ ತಲೆನೋವು, ಜ್ವರ, ವಾಂತಿ, ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತವೆ. ಆರಂಭದಲ್ಲಿ ಇವು ಸಾಮಾನ್ಯ ಜ್ವರದಂತೆ ಕಾಣುವುದರಿಂದ ಜನರು ಗಂಭೀರವಾಗಿ ಪರಿಗಣಿಸದಿರಬಹುದು. ರೋಗ ಮುಂದುವರಿದಂತೆ, ಕುತ್ತಿಗೆ ಬಿಗಿತ, ಗೊಂದಲ, ಅಸ್ಪಷ್ಟ ಮಾತು, ಮತ್ತು ಕೋಮಾದಂತಹ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್, ‘ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್ ವಿರುದ್ಧ ಎಚ್ಚರಿಕೆಯ ಅಗತ್ಯವಿದೆ. ಸಾರ್ವಜನಿಕರು ಕಲುಷಿತ ನೀರಿನಲ್ಲಿ ಈಜದಿರಲು ಮತ್ತು ನೈರ್ಮಲ್ಯ ಕಾಪಾಡಿಕೊಳ್ಳಲು ಜಾಗರೂಕರಾಗಿರಿ’ ಎಂದು ಸಲಹೆ ನೀಡಿದ್ದಾರೆ. ಆರೋಗ್ಯ ಇಲಾಖೆಯು ಕೊಳಗಳು ಮತ್ತು ಸಾರ್ವಜನಿಕ ಈಜುಕೊಳಗಳ ಸ್ವಚ್ಛತೆಯನ್ನು ಪರಿಶೀಲಿಸುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !