Sunday, September 21, 2025

ಸೋನಿಯಾ, ರಾಹುಲ್ ತಾಳಕ್ಕೆ ಕುಣಿದು ಸಿದ್ದರಾಮಯ್ಯ ಹಿಂದು ಧರ್ಮ ಒಡೆಯಲು ಷಡ್ಯಂತ್ರ: ಸಂಸದ ಕಾರಜೋಳ

ಹೊಸದಿಗಂತ ವರದಿ,ವಿಜಯಪುರ:

ಬ್ರಿಟಿಷರು, ಮೊಘಲರು ಆಳ್ವಿಕೆ ನಡೆಸಿದರೂ ಹಿಂದು ಧರ್ಮಕ್ಕೆ ಅಪಾಯ ಬರಲಿಲ್ಲ, ಆದರೆ ಕ್ರಿಶ್ಚಿಯನ್ ರಾಷ್ಟ್ರ ಮಾಡುವ ಹುನ್ನಾರ ಹೊಂದಿರುವ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಾಳಕ್ಕೆಕುಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ಹೆಸರಿನಲ್ಲಿ ಹಿಂದು ಧರ್ಮ ಒಡೆಯುವ ಷಡ್ಯಂತ್ರ ನಡೆಸಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದು ಧರ್ಮ ಒಡೆಯುವ ಈ ಪ್ರಯತ್ನಕ್ಕೆ ನಮ್ಮ ವಿರೋಧವಿದೆ, ಅವೈಜ್ಞಾನಿಕವಾಗಿ ಈ ಸಮೀಕ್ಷೆ ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಮಾಡುತ್ತಿರುವ ಈ ಸಮೀಕ್ಷೆ ಸಂವಿಧಾನ ಪರಿಚ್ಚೇಧ 341 ಕ್ಕೆ ಸಂಪೂರ್ಣ ವಿರೋಧವಾಗಿದೆ ಎಂದರು.

ಜೈನ ಪಂಚಮಸಾಲಿ, ಕ್ರಿಶ್ಚಿಯನ್ ಕುರುಬ, ಕ್ರಿಶ್ಚಿಯನ್ ಪಂಚಮಸಾಲಿ ಈ ರೀತಿ ಜಾತಿ, ಸಮುದಾಯಗಳನ್ನೇ ಯಾರು ಕೇಳಿಲ್ಲ, ಈ ರೀತಿ ಜಾತಿಗಳನ್ನು ಸೃಜಿಸಿದ್ದು ಯಾರು? ಎಂದು ಪ್ರಶ್ನಿಸಿದರು. ಒಬ್ಬ ವ್ಯಕ್ತಿ ಧರ್ಮಾಂತರ ಆದರೆ ಹಿಂದಿನ ಧರ್ಮದ ಪೂರ್ವಾಶ್ರಮದ ಎಲ್ಲ ಸಂಬಂಧ ಕಡಿತಗೊಳ್ಳುತ್ತಿದೆ ಎಂಬ ಪರಿಜ್ಞಾನವೂ ಇಲ್ಲವೇ ಎಂದು ಪ್ರಶ್ನಿಸಿದರು.

ಜಾತಿ ಗಣತಿಗೆ ಅವರ ಸಚಿವರೇ ವಿರೋಧಿಸಿದ್ದಾರೆ, ಜಾತಿ ಗಣತಿ ವಿರೋಧಿಸುವವರಿಗೆ ಮಂತ್ರಿಮಂಡಳದಿಂದ ವಜಾ ಹಾಗೂ ಹೈಕಮಾಂಡ್ ಗೆ ದೂರು ನೀಡುವುದಾಗಿ ಮುಖ್ಯಮಂತ್ರಿ ತಮ್ಮ ಸಚಿವರಿಗೆ ಬೆದರಿಕೆ ಹಾಕಿದ್ದಾರೆ, ಈ ರೀತಿಯ ದುರಾಡಳಿತ ಬ್ರಿಟಿಷರ ಅವಧಿಯಲ್ಲೂ ಆಗಿಲ್ಲ ಎಂದು ದೂರಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದೇ ಒಂದು ರೂ. ಅಭಿವೃದ್ಧಿ ಕಾರ್ಯ ಮಾಡಿಲ್ಲ, ಕೇವಲ ತಮ್ಮ ಬೆನ್ನು ತಾವೇ ಚಪ್ಪರಿಸಿಕೊಳ್ಳುವ ಮುಖ್ಯಮಂತ್ರಿಗಳು ಅತಿ ಹೆಚ್ಚು ಸಾಲ ಮಾಡಿದ್ದು ಏಕೆ ಹೇಳುವುದಿಲ್ಲ ಎಂದು ಪ್ರಶ್ನಿಸಿದ ಅವರು, ರಾಜ್ಯದ ಒಟ್ಟು ಸಾಲ 7 ಲಕ್ಷ ಕೋಟಿ ರೂ.ಗಳಲ್ಲಿ 5 ಲಕ್ಷ ಕೋಟಿ ರೂ. ಸಿದ್ದರಾಮಯ್ಯ ಅವರ ಅವಧಿಯಲ್ಲಿಯೇ ಆಗಿದೆ, ಅತಿ ಹೆಚ್ಚು ಸಾಲ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 38 ಸಾವಿರ ಕೋಟಿ ರ ಎಸ್.ಇ.ಪಿ. ಟಿ.ಎಸ್.ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿ ದಲಿತರಿಗೆ ಮೋಡಿ ಮಾಡಿದ್ದು ಸಿದ್ದರಾಮಯ್ಯ ಎಂದರು.

ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಈ ಜಾತಿ ಜನಗಣತಿ ಮುನ್ನಲೆಗೆ ತಂದಿದೆ, ಈ ಹಿಂದೆ ನ್ಯಾ.ಕಾಂತ ರಾಜ್ ವರದಿಯ ಒಂದು ಪುಟ ಸಹ ತಿರುವಿ ಹಾಕಲಿಲ್ಲ, ಈಗ ಪುನಃ 420 ಕೋಟಿ ರೂ. ಹಣವನ್ನು ಸಮೀಕ್ಷೆ ಕಾರ್ಯಕ್ಕೆ ಬಳಸಿ ಸಾರ್ವಜನಿಕರ ಹಣ ದುರಪಯೋಗಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ ಎಂದರು.

ಎಲ್ಲದಕ್ಕೂ ಎಸ್.ಐ.ಟಿ. ರಚನೆಗೆ ಮುಂದಾಗುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮೇಲೆ ಬಂದಿರುವ ಆರೋಪದಮೇಲೆ ಎಸ್.ಐ.ಟಿ ತನಿಖೆ ಮಾಡಲಿ, ಮತ ಖರೀದಿ ಮೇಲೆ ಅವರು ಗೆಲುವು ಸಾಧಿಸಿದ್ದಾರೆ ಎಂಬುದು ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಎಂ.ಇಬ್ರಾಹಿಂ ಆರೋಪ ಮಾಡಿದ್ದಾರೆ, ಹೀಗಾಗಿ ತಮ್ಮ ಮೇಲೆ ಬಂದಿರುವ ಆರೋಪಗಳ ಬಗ್ಗೆ ಎಸ್.ಐ.ಟಿ ತನಿಖೆ ನಡೆಸಿಕೊಳ್ಳಲಿ ಎಂದು ಸವಾಲು ಹಾಕಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಎಸ್.ಸಿ. ಮೋರ್ಚಾ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ, ಮುಖಂಡರಾದ ಸಂಜಯ ಪಾಟೀಲ ಕನಮಡಿ, ರವೀಂದ್ರ ಲೋಣಿ, ಸ್ವಪ್ನಾ ಕಣಮುಚನಾಳ, ಶಿಲ್ಪಾ ಕುದರಗೊಂಡ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಇದನ್ನೂ ಓದಿ