April 25, 2026
Saturday, April 25, 2026
spot_img

ರಾಜ್ಯದ ಎಲ್ಲ ಜನರನ್ನು ಸಮೀಕ್ಷೆ ತಲುಪಬೇಕು: ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ

ಹೊಸದಿಗಂತ ವರದಿ,ಚಿತ್ರದುರ್ಗ :

ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಸಾಮಾಜಿಕ, ಶೈಕ್ಷಣಿಕ ಗಣತಿಯನ್ನು ರಾಜ್ಯದಲ್ಲಿನ ೭ ಕೋಟಿ ಜನರನ್ನು ತಲುಪುವವರೆಗೂ ನಡೆಸಬೇಕು. ಇದಕ್ಕೆ ಯಾವುದೇ ಕಾಲಮಿತಿ ಹಾಕುವುದು ಬೇಡ. ಈ ಸಮೀಕ್ಷೆಯಿಂದ ಯಾರೂ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದು ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಒತ್ತಾಯಿಸಿದರು.

ಚಿತ್ರದುರ್ಗ ನಗರದ ಹೊರವಲಯದ ಭೋವಿ ಗುರುಪೀಠದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ರಾಜ್ಯ ಸರ್ಕಾರ ಸಾಮಾಜಿಕ ಶೈಕ್ಷಣಿಕ ಗಣತಿ ನಡೆಸುತ್ತಿರುವುದು ಸ್ವಾಗತಾರ್ಹ. ಈ ಸಮೀಕ್ಷೆ ರಾಜ್ಯದಲ್ಲಿ ವಿವಿಧ ಜಾತಿಗಳ ಪ್ರಗತಿಗೆ ಕಾರಣವಾಗಲಿದೆ. ಈ ಸಮೀಕ್ಷೆಯನ್ನು ಯಾರೂ ಸಹಾ ನಿರ್ಲಕ್ಷ್ಯ ಮಾಡಬಾರದು. ಎಲ್ಲರೂ ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಮೂಲಕ ನಿಮ್ಮ ನಿಮ್ಮ ಜಾತಿಯನ್ನು ಗುರುತಿಸಿಕೊಳ್ಳಬೇಕಿದೆ ಎಂದರು.
ರಾಜ್ಯದ ಕೆಲವು ಪ್ರದೇಶಗಳಲ್ಲಿ ಜನರು ತಮ್ಮ ಊರುಗಳನ್ನು ಬಿಟ್ಟು ಕೆಲಸಕ್ಕಾಗಿ ಬೇರೆಡೆಗೆ ವಲಸೆ ಹೋಗಿದ್ದಾರೆ. ಇಂತಹವರನ್ನು ಸಹಾ ಈ ಗಣತಿಯಲ್ಲಿ ಒಳಪಡಿಸಬೇಕಿದೆ. ಕಟ್ಟಡ ಕೆಲಸಕ್ಕಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಗೆ ಹೋಗಿದ್ದಾರೆ. ಉತ್ತರ ಕರ್ನಾಟಕದಿಂದ ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಹೋಗಿದ್ದಾರೆ. ಕೊಪ್ಪಳ, ಬಳ್ಳಾರಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಜಿಲ್ಲೆಯನ್ನು ಬಿಟ್ಟು ಹೊರಗಡೆ ಹೋಗಿರುತ್ತಾರೆ. ಇಂತಹರನ್ನು ಸಹಾ ಸಮೀಕ್ಷೆ ಮಾಡಲು ಪ್ರತ್ಯೇಕ ತಂಡವನ್ನು ನೇಮಕ ಮಾಡುವಂತೆ ಶ್ರೀಗಳು ಆಗ್ರಹಿಸಿದರು.

ಮೈಸೂರಿನ ದಸರಾ ಹಬ್ಬ ನಾಡಹಬ್ಬವಾಗಿ ಪರಿಣಿಮಿಸಿದೆ. ಈ ಸಮಯದಲ್ಲಿ ಊರಿನಿಂದ ಹೊರಗೆ ಹೋದವರು ಸಹಾ ವಾಪಾಸ್ಸು ಬರುತ್ತಾರೆ. ಇದೇ ಉತ್ತರ ಕರ್ನಾಟಕದಲ್ಲಿ ದೀಪಾವಳಿ ಹಬ್ಬ ನಾಡಹಬ್ಬವಾಗಿದೆ. ಈ ಸಮಯದಲ್ಲಿ ಸಹಾ ಊರಿನಿಂದ ಹೋರಗಡೆ ಹೋದವರು ವಾಪಾಸ್ಸು ಬರುತ್ತಾರೆ. ಇಂತಹ ಸಮಯದಲ್ಲಿ ಸರ್ಕಾರ ಮಾಡುವ ಸಮೀಕ್ಷೆ ಸರಿಯಿದೆ. ಇದನ್ನು ಸೂಕ್ಷ್ಮವಾಗಿ ಪರಿಗಣಿಸಿ ಸಮೀಕ್ಷೆ ಮಾಡಬೇಕಿದೆ. ರಾಜ್ಯದ ಎಲ್ಲಾ ಜನತೆ ಈ ಸಮಿಕ್ಷೆಯಲ್ಲಿ ಭಾಗವಹಿಸಿದ್ದಾರೆ ಎಂದು ಖಾತರಿಯಾದ ಮೇಲೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು.

ನಮ್ಮ ಭೋವಿ ಸಮುದಾಯ ಅರೆ ಅಲೆಮಾರಿಯಾಗಿದ್ದು, ಕೆಲಸದ ನಿಮ್ಮಿತ್ತ ಊರು ಬಿಟ್ಟು ಹೋಗಿರುತ್ತಾರೆ. ಬೇರೆ ಊರಿಗೆ ಹೋದವರು ತಮ್ಮ ಊರಿಗೆ ಬಂದು ಗಣಿತಿದಾರರಿಗೆ ಸೂಕ್ತ ಮಾಹಿತಿ ನೀಡಬೇಕು. ಭೋವಿ ಸಮುದಾಯ ಸರಿಯಾದ ರೀತಿಯಲ್ಲಿ ಸಂಖ್ಯೆಯನ್ನು ನಮೂದಿಸಬೇಕಿದೆ ಎಂದು ಶ್ರೀಗಳು ಸಮುದಾಯವರಿಗೆ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿ ಹೆಚ್.ಲಕ್ಷ್ಮಣ್, ಭೋವಿ ಗುರುಪೀಠದ ಮುಖ್ಯ ಕಾರ್ಯ ನಿರ್ವಹಕಾಧಿಕಾರಿ ಗೌನಹಳ್ಳಿ ಗೋವಿಂದಪ್ಪ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !