ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಲಿಂಗಾಯತ ಸ್ವಾಮೀಜಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾರಣಕ್ಕೆ ಕನ್ನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳಿಗೆ ಇದೀಗ ಧಾರವಾಡ ಜಿಲ್ಲಾ ಪ್ರವೇಶಕ್ಕೂ ನಿರ್ಬಂಧಿಸಲಾಗಿದೆ.
ಕನ್ನೇರಿ ಶ್ರೀಗಳಿಗೆ ಧಾರವಾಡ ಜಿಲ್ಲೆಗೆ ಪ್ರವೇಶ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ದಿವ್ಯಪ್ರಭು ಆದೇಶ ಹೊರಡಿಸಿದ್ದಾರೆ.
ನವೆಂಬರ್ 7ರಂದು ಅಣ್ಣಿಗೇರಿಯ ಕಾರ್ಯಕ್ರಮ ಸಂಬಂಧ ಕನ್ನೇರಿ ಶ್ರೀಗಳು ಧಾರವಾಡಕ್ಕೆ ಆಗಮಿಸಬೇಕಿತ್ತು. ಆದ್ರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಈ ಮನವಿ ಮೇರೆಗೆ ಡಿಸಿ ಈ ಕ್ರಮ ಕೈಗೊಂಡಿದ್ದಾರೆ.
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ನವೆಂಬರ್ 5ರಿಂದ 7ರವರೆಗೆ ಸಹಜಾನಂದ ಸಪ್ತಾಹ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ನವೆಂಬರ್ 7ರಂದು ನಡೆಯುವ ಕಾರ್ಯಕ್ರಮದ ಸಮಾರೋಪ ಸಮಾರಂಭಕ್ಕೆ ಕನ್ನೇರಿ ಮಠದ ಸ್ವಾಮೀಜಿಯನ್ನು ಆಹ್ವಾನಿಸಲಾಗಿದೆ. ಈ ಬಗ್ಗೆ ಬಸವಪರ ಸಂಘಟನೆಗಳು ಮತ್ತಷ್ಟು ಕೆಂಡಾಮಂಡಲವಾಗಿವೆ. ಈಗಾಗಲೇ ಕಳೆದ ಅಕ್ಟೋಬರ್ 30ರಂದು ಬಸವಪರ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಬೆನ್ನಲ್ಲೇ ನವೆಂಬರ್ 1ರಂದು ಅಣ್ಣಿಗೇರಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಲಿಂಗಾಯತ ಸ್ವಾಮೀಜಿಗಳು, ʼಕನ್ನೇರಿ ಸ್ವಾಮೀಜಿ ಅಣ್ಣಿಗೇರಿ ತಾಲೂಕಿಗೆ ಬರುವುದನ್ನೂ ತಡೆಹಿಡಿಯಬೇಕುʼ ಎಂದು ಅಗ್ರಹಿಸಿದ್ದರು.
ಈಗಾಗಲೇ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧ ಹೇರಲಾಗಿದೆ.

