Tuesday, November 25, 2025

ಚಿತ್ರದುರ್ಗದಲ್ಲಿ ಸಂಚಾರಿ ಪೊಲೀಸರ ದೌರ್ಜನ್ಯ ಖಂಡಿಸಿ ಬೀದಿಗಿಳಿದ ಆಟೋ ಚಾಲಕರು

ಹೊಸ ದಿಗಂತ ವರದಿ, ಚಿತ್ರದುರ್ಗ:

ಸಂಚಾರಿ ಪೊಲೀಸರ ದೌರ್ಜನ್ಯ ಖಂಡಿಸಿ ಆಟೋ ಚಾಲಕರು ಭಾನುವಾರ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಸಂಖ್ಯೆ ಆಟೋ ಚಾಲಕರು, ಗಾಂಧಿ ವೃತ್ತದ ಅಕ್ಕಪಕ್ಕದಲ್ಲಿ ಆಟೋಗಳನ್ನು ಸಾಲಾಗಿ ನಿಲ್ಲಿಸಿದರು. ಗಾಂಧಿ ವೃತ್ತದ ಸುತ್ತ ಬ್ಯಾರಿಕೇಡ್ ನಿರ್ಮಿಸಿ ವಾಹನ ಸಂಚಾರ ಬಂದ್ ಮಾಡಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸಾವಿರಾರು ಸಂಖ್ಯೆಯ ಆಟೋಗಳಿವೆ. ಆಟೋಚಾಲಕರು ಸಾರ್ವಜನಿಕರಿಗೆ ಸೇವೆ ನೀಡುವ ಮೂಲಕ ಕಷ್ಟಪಟ್ಟು ಸಂಪಾದನೆ ಮಾಡಿ ಜೀವನ ನಡೆಸುತ್ತಿದ್ದಾರೆ. ಆದರೆ ಗಾಂಧಿ ವೃತ್ತ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ಸಂಚಾರಿ ಪೊಲೀಸರು ಆಟೋ ಚಾಲಕರಿಗೆ ಕಿರುಕುಳ ನೀಡುತ್ತಿದ್ದಾರೆ. ಚಿಕ್ಕಪುಟ್ಟ ವಿಷಯಗಳಿಗೂ ಕಿರಿಕಿರಿ ಮಾಡುತ್ತಾ ತೊಂದರೆ ಕೊಡುತ್ತಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅನೇಕರಿಗೆ ಸ್ವಂತ ಆಟೋಗಳಿಲ್ಲ, ಹಾಗಾಗಿ ಬಾಡಿಗೆ ಆಟೋಗಳನ್ನು ಪಡೆದು ಓಡಿಸುತ್ತಿದ್ದಾರೆ. ಆಟೋ ಮಾಲೀಕರಿಗೆ ದಿನವೊಂದಕ್ಕೆ ೩೦೦ ರೂ. ಬಾಡಿಗೆ ನೀಡಬೇಕು. ದಿನಪೂರ್ತಿ ಆಟೋ ಓಡಿಸಿದರೂ ೫೦೦ ರೂ. ಸಂಪಾದನೆ ಆಗುವುದು ಕಷ್ಟ. ಇದರಲ್ಲಿ ಮಾಲೀಕರಿಗೆ ೩೦೦ ರೂ. ಬಾಡಿಗೆ ಹಣ ನೀಡಿದಲ್ಲಿ ನಮಗೆ ಕೇವಲ ೨೦೦ ರೂ. ಉಳಿಯುತ್ತದೆ. ಇದರಲ್ಲಿ ನಾವು ಜೀವನ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಅಲವತ್ತುಕೊಂಡರು.

ಆಟೋ ಚಾಲನೆ ಮಾಡುವಾಗ ಚಿಕ್ಕಪುಟ್ಟ ತಪ್ಪುಗಳಾಗುವುದು ಸಹಜ. ಅಂದ ಮಾತ್ರಕ್ಕೆ ಸಂಚಾರಿ ಪೊಲೀಸರು ೫೦೦ ರೂ. ದಂಡ ಹಾಕುತ್ತಾರೆ. ಹಗಲು ರಾತ್ರಿ ಎನ್ನದೇ ಆಟೋ ಚಾಲನೆ ಮಾಡಿ ಸಂಪಾದನೆ ಮಾಡಿದ ಅಷ್ಟು ಹಣವನ್ನು ಒಂದೇ ಕ್ಷಣದಲ್ಲಿ ಪೊಲೀಸರಿಗೆ ಇಡಬೇಕು. ನಮ್ಮಿಂದ ತಪ್ಪಾಗಿದ್ದಲ್ಲಿ ದಂಡ ಹಾಕಿದರೆ ಕೋರ್ಟ್‌ನಲ್ಲಿ ದಂಡ ಕಟ್ಟುತ್ತೇವೆ. ಆದರೆ ಹಣ ಕೊಡುವ ತನಕ ನಮ್ಮನ್ನು ಮುಂದಕ್ಕೆ ಬಿಡದ ಪೊಲೀಸರು, ದಂಡದ ಹಣವನ್ನು ಸ್ವಾಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ರಾತ್ರಿ ೮.೩೦ ರ ಸುಮಾರಿಗೆ ಗಾಂಧಿ ವೃತ್ತದಲ್ಲಿ ಆಟೋಗೆ ಅಡ್ಡಹಾಕಿ ೫೦೦೦ ರೂ. ದಂಡ ವಿಧಿಸಿದ್ದಾರೆ. ಅಷ್ಟು ಹಣ ಕೊಡಲಾಗದ ಚಾಲಕ ೫೦೦ ರೂ.ಗಳನ್ನು ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಹೆಚ್ಚಿನ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಹಣ ನೀಡದ ಕಾರಣ ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದ ಚಾಲಕ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರ ಉಪಟಳದಿಂದ ನಾವು ಆಟೋ ಓಡಿಸುವುದು ದುಸ್ತರವಾಗಿದೆ. ನಮ್ಮ ಪರಿಸ್ಥಿತಿ ಕುರಿತು ಪೊಲೀಸರಿಗೆ ತಿಳಿಸಿದರೆ ಅವರು ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇವರ ಕಿರಿಕಿರಿಯಿಂದ ಆಟೋ ಚಾಲಕರಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಗಮನ ನೀಡಬೇಕು. ಪೊಲೀಸರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಸೇರಿದಂತೆ ಆಟೋಚಾಲಕರಿಗೆ ನ್ಯಾಯ ಒದಗಿಸಬೇಖು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಹಠಾತ್ ಪ್ರತಿಭಟನೆಯಿಂದ ಎಚ್ಚೆತ್ತ ಪೊಲೀಸರು ಗಾಂಧಿ ವೃತ್ತಕ್ಕೆ ದೌಡಾಯಿಸಿದರು. ಪ್ರತಿಭಟನಾಕಾರರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿದರು. ಆಟೋಚಾಲಕರ ಪ್ರತಿಭಟನೆಯಿಂದಾಗಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದ ಪೊಲೀಸರು ಹರಸಾಹಸ ಮಾಡುವಂತಾಯಿತು. ಮಧ್ಯಾಹ್ನದ ಸುಮಾರಿಗೆ ಘಟನಾ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಪ್ರಕರಣ ಕುರಿತು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

error: Content is protected !!