ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಒಂದೆಡೆ ಚೆಂಡೆ, ಮದ್ದಳೆ ಜೊತೆ ಮುಮ್ಮೇಳದ ಅಬ್ಬರ, ಮತ್ತೊಂದೆಡೆ ರಂಗಸ್ಥಳದಲ್ಲಿ ಚಂಡ ಮುಂಡ, ರಕ್ತಬೀಜ ಶುಂಭರ ಅರ್ಭಟ, ಪಕ್ಕದ ‘ಕದಂಬವನ’ದ ತೂಗುಯ್ಯಾಲೆಯಲ್ಲಿ ಪವಡಿಸಿದ ಶ್ರೀದೇವಿ…
ಬಿ.ಸಿ. ರೋಡ್ ಮೊಡಂಕಾಪು ಚೆನ್ನರಪಾಲು ಎಂಬಲ್ಲಿ ಸೋಮವಾರ ರಾತ್ರಿ ಡೊಂಬಯ್ಯ ಕುಲಾಲ್ ಸಹೋದರರ ವತಿಯಿಂದ ಹಮ್ಮಿಕೊಂಡ ಕಟೀಲು ಆರನೇ ಮೇಳದ ‘ಶ್ರೀ ದೇವೀ ಮಹಾತ್ಮ್ಯೆ’ ಪ್ರಸಂಗ ರೋಚಕ ಹಂತ ತುಪುತ್ತಿದ್ದಂತೆಯೇ ಅದೆಲ್ಲಿಂದಲೋ ಹಾರಿ ಬಂದ ಹಕ್ಕಿಯೊಂದು ಶ್ರೀದೇವಿಯ ಶಿರದಲ್ಲಿ ನಿರ್ಭೀತಿಯಿಂದ ಪವಡಿಸಿ ಎಲ್ಲರ ಅಚ್ಚರಿಗೆ ಕಾರಣವಾಯಿತು.
ರಾತ್ರಿ ಸುಮಾರು 11 ಗಂಟೆಯ ವೇಳೆಗೆ ಈ ವಿಸ್ಮಯಕಾರಿ ಘಟನೆ ನಡೆದಿದ್ದು, ಮೊದಲಿಗೆ ಈ ಹಕ್ಕಿ ಶ್ರೀದೇವಿ ವೇಷಧರಿಸಿದ್ದ ಸಂದೀಪ್ ಕೋಳ್ಯೂರು ಅವರ ಮಡಿಲಿಗೆ ಹಾರಿ ಬಂದಿತ್ತು. ಬಳಿಕ ಅಲ್ಲಿಂದ ನಿಧಾನವಾಗಿ ಮೇಲೆರುತ್ತಾ ಶಿರ ಭಾಗಕ್ಕೆ ಬಂದು ಅಲ್ಲಿಯೇ ಕುಳಿತಿದೆ. ಹಕ್ಕಿಯ ಚಲನೆಯನ್ನು ನಗುನಗುತ್ತಾ ಗಮನಿಸುತ್ತಿದ್ದ ಪಾತ್ರಧಾರಿ ಬಳಿಕ ಕಿರೀಟದತ್ತ ಮೇಲೇರಲು ಸಾಧ್ಯವಾಗದೆ ಹಕ್ಕಿ ಕುಳಿತಾಗ ಮೆಲ್ಲನೆ ಅದರ ಮೈ ಸವರಿ ಕಳುಹಿಸಿಕೊಟ್ಟಿದ್ದಾರೆ. ಇತ್ತ ಯಕ್ಷಗಾನ ನೋಡಲು ಬಂದ ಪ್ರೇಕ್ಷಕರು ಈ ಅಚ್ಚರಿಯ ಬೆಳವಣಿಗೆ ಕಂಡು ಮೂಕವಿಸ್ಮಿತರಾಗಿದ್ದಾರೆ!

