Thursday, December 4, 2025

15 ವರ್ಷಗಳ ಬಳಿಕ ದೇಶೀ ಕದನಕ್ಕೆ ವಿರಾಟ್ ಎಂಟ್ರಿ: ವಿಜಯ್ ಹಜಾರೆ ಟೂರ್ನಿಯಲ್ಲಿ ರೋಹಿತ್-ಕೊಹ್ಲಿ ಅಬ್ಬರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಸೌತ್ ಆಫ್ರಿಕಾ ನಡುವಣ ಏಕದಿನ ಸರಣಿ ಡಿಸೆಂಬರ್ 6 ರಂದು ಅಂತ್ಯಗೊಳ್ಳುತ್ತಿದ್ದಂತೆ, ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರು ಡಿಸೆಂಬರ್ 24 ರಿಂದ ಶುರುವಾಗಲಿರುವ ಪ್ರತಿಷ್ಠಿತ ವಿಜಯ್ ಹಜಾರೆ ಏಕದಿನ ಟೂರ್ನಿಯಲ್ಲಿ ತಮ್ಮ ರಾಜ್ಯ ತಂಡಗಳನ್ನು ಪ್ರತಿನಿಧಿಸಲಿದ್ದಾರೆ.

ಕಿಂಗ್ ಕೊಹ್ಲಿ ಅವರು ದೆಹಲಿ ತಂಡದ ಪರ ಕಣಕ್ಕಿಳಿದರೆ, ಹಿಟ್​ಮ್ಯಾನ್ ರೋಹಿತ್ ಶರ್ಮಾ ಅವರು ಮುಂಬೈ ತಂಡವನ್ನು ಮುನ್ನಡೆಸಲಿದ್ದಾರೆ. ದೇಶೀಯ ಟೂರ್ನಿಯಲ್ಲಿ ಇವರು ಎಷ್ಟು ಪಂದ್ಯಗಳನ್ನು ಆಡಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲವಾದರೂ, ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಸರಣಿಯವರೆಗೆ ಟೂರ್ನಿಯಲ್ಲಿ ಮುಂದುವರೆಯುವ ಸಾಧ್ಯತೆ ಇದೆ.

ಕೊಹ್ಲಿ ಅವರು ಬರೋಬ್ಬರಿ 15 ವರ್ಷಗಳ ಸುದೀರ್ಘ ಅಂತರದ ಬಳಿಕ ವಿಜಯ್ ಹಜಾರೆ ಟೂರ್ನಿಗೆ ಮರಳುತ್ತಿದ್ದಾರೆ. ಅವರು ಕೊನೆಯ ಬಾರಿ ಆಡಿದ್ದು 2010 ರಲ್ಲಿ. ಅಂದು ದೆಹಲಿ ಪರ 5 ಪಂದ್ಯಗಳಲ್ಲಿ ಬ್ಯಾಟ್ ಬೀಸಿ 45.80 ಸರಾಸರಿಯಲ್ಲಿ 229 ರನ್ ಗಳಿಸಿ, 2 ಅರ್ಧಶತಕ ದಾಖಲಿಸಿದ್ದರು.

ರೋಹಿತ್ ಶರ್ಮಾ ಕೂಡ 7 ವರ್ಷಗಳ ನಂತರ ದೇಶೀಯ ಏಕದಿನ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಕೊನೆಯ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡಿದ್ದು 2019 ರಲ್ಲಿ. ಮುಂಬೈ ಪರ 2 ಪಂದ್ಯಗಳಲ್ಲಿ ಕಣಕ್ಕಿಳಿದು ಒಟ್ಟು 50 ರನ್ ಗಳಿಸಿದ್ದರು. ಈ ಇಬ್ಬರು ಕ್ರಿಕೆಟ್ ದೈತ್ಯರ ಎಂಟ್ರಿಯಿಂದ ಟೂರ್ನಿಗೆ ಹೊಸ ಮೆರುಗು ಬಂದಿದ್ದು, ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಿಸಿದೆ. ದೆಹಲಿ ಮತ್ತು ಮುಂಬೈ ತಂಡಗಳು ನಾಕೌಟ್ ಹಂತಕ್ಕೆ ಪ್ರವೇಶಿಸಿದರೆ, ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ರೋಹಿತ್ ಮತ್ತು ಕೊಹ್ಲಿ ಮುಖಾಮುಖಿಯನ್ನು ನೋಡುವ ಅವಕಾಶ ಲಭಿಸಲಿದೆ.

error: Content is protected !!