ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ನಿರ್ದೇಶಕನಾಗಿ ಮೆಚ್ಚುಗೆ ಗಳಿಸಿರುವ ಅವರು ಬೆಂಗಳೂರಿನ ಅಶೋಕನಗರದಲ್ಲಿನ ಪಬ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯದ ಬೆರಳು ತೋರಿಸಿ ಅಸಭ್ಯ ವರ್ತನೆ ಮಾಡಿದ ವಿಡಿಯೋ ವೈರಲ್ ಆದ ನಂತರ ಪೊಲೀಸ್ ತನಿಖೆಯ ಆರಂಭವಾಗಿದೆ.
ಕಬ್ಬನ್ ಪಾರ್ಕ್ ಎಸಿಪಿ ನೇತೃತ್ವದ ತಂಡ ಕಳೆದ ರಾತ್ರಿ ಪಬ್‌ಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಿ, ಆರ್ಯನ್ ವರ್ತನೆ ಕುರಿತು ಮಾಹಿತಿಗಳನ್ನು ಪರಿಶೀಲಿಸಿದ್ದಾರೆ. ಘಟನೆಯ ಕುರಿತು ಯಾವುದೇ ಅಧಿಕೃತ ದೂರು ಮೊದಲಿಗೆ ದಾಖಲಾಗದಿದ್ದರೂ, ವಿಡಿಯೋ ವೈರಲ್ ಆದ ನಂತರ ಪೊಲೀಸರು ತನಿಖೆ ಆರಂಭಿಸಿದರು.
ಇದಾದ ಬಳಿಕ ಹಿಂದೂ ಮುಖಂಡರೊಬ್ಬರು ಇಮೇಲ್ ಮೂಲಕ ದೂರು ಸಲ್ಲಿಸಿ, ಆರ್ಯನ್ ಜೊತೆಗೆ ಮತ್ತಿಬ್ಬರ ವಿರುದ್ಧ ಆರೋಪ ಮಾಡಿದ್ದಾರೆ. ಸಾರ್ವಜನಿಕ ಜವಾಬ್ದಾರಿ ಹೊಂದಿದವರಿದ್ದರೂ ಅಸಭ್ಯ ವರ್ತನೆಗೆ ಮೌನ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ತನಿಖೆಯಲ್ಲಿ ಹೊಸ ಮಾಹಿತಿಯೂ ಬೆಳಕಿಗೆ ಬಂದಿದೆ. ಕಾರ್ಯಕ್ರಮಕ್ಕೆ ಟೆಕ್ನಿಷನ್ ಆಗಿ ಹಾಜರಿದ್ದ ಯುವಕನಿಗೆ ಆರ್ಯನ್ ಖಾನ್ ಮಧ್ಯದ ಬೆರಳು ತೋರಿಸಿದರೆನ್ನಲಾಗಿದೆ. ಯುವಕನನ್ನು ವಿಚಾರಣೆ ಮಾಡಿದ ಪೊಲೀಸರು, ಆತ ನೀಡಿದ ದ್ವಂದ್ವ ಹೇಳಿಕೆಗಳಿಂದ ಘಟನೆಗೆ ಮತ್ತಷ್ಟು ಕುತೂಹಲ ಮೂಡಿದೆ.

