July 15, 2026
Wednesday, July 15, 2026
spot_img

ವಧು ವರರಿಗೆ ತಟ್ಟಿತು ʼಇಂಡಿಗೋʼ ಬಿಸಿ: ತಮ್ಮದೇ ರಿಸೆಪ್ಷನ್‌ಗೆ ಬರೋಕ್ಕಾಗಿಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಳೆದೆರಡು ದಿನಗಳಿಂದ ಇಂಡಿಗೊ ವಿಮಾನ ಹಾರಾಟ ರದ್ದತಿಯಿಂದ ಅದರಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಿದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಅದರಿಂದ ನಮ್ಮ ಕರ್ನಾಟಕದ ಹುಬ್ಬಳ್ಳಿಯ ಜೋಡಿ ಆನ್ ಲೈನ್ ನಲ್ಲಿ ವಿವಾಹವಾಗಬೇಕಾದ ಪರಿಸ್ಥಿತಿ ಉಂಟಾಯಿತು.

ಮೊನ್ನೆ ವಧು-ವರರ ಆರತಕ್ಷತೆಗೆ ಎಲ್ಲ ಸಿದ್ಧತೆ ನಡೆದಿತ್ತು. ಇನ್ನೇನು ಸಮಾರಂಭ ಶುರುವಾಗಬೇಕು, ಆದರೂ ವಧು ಹಾಗೂ ವರನ ಆಗಮನವಿಲ್ಲ. ಕೊನೆಗೆ ವಧುವಿನ ತಂದೆ ತಾಯಿಯೇ ವಧು-ವರರ ಕುರ್ಚಿಯಲ್ಲಿ ಕುಳಿತು ಬಂದ ಬಂಧುಗಳಿಂದ ಶುಭ ಹಾರೈಕೆ ಸ್ವೀಕರಿಸಿದರು. ಹೀಗೊಂದು ಅಪರೂಪದ ಘಟನೆಗೆ ಹುಬ್ಬಳ್ಳಿಯ ಗುಜರಾತ್ ಭವನ ಸಾಕ್ಷಿಯಾಗಿದೆ. ಇದಕ್ಕೆ ಕಾರಣವಾಗಿದ್ದು ಇಂಡಿಗೋ ವಿಮಾನ ರದ್ದತಿ. ದೇಶದಾದ್ಯಂತ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದ್ದರ ಬಿಸಿ ನೂತನ ವಧು ವರರಿಗೂ ತಟ್ಟಿದೆ.

ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಮೊನ್ನೆ ಬುಧವಾರ ವಧು ಮೇಧಾ ಕ್ಷೀರಸಾಗರ ಹಾಗೂ ವರ ಸಂಗಮ ದಾಸ್ ಅವರ ಆರತಕ್ಷತೆ ಆಯೋಜಿಸಲಾಗಿತ್ತು. ನವೆಂಬರ್ 23ರಂದು ಭುವನೇಶ್ವರದಲ್ಲಿ ಈ ಜೋಡಿ ಮದುವೆಯಾಗಿತ್ತು, ಬೆಂಗಳೂರಿಗೆ ಆಗಮಿಸಿ ಅಲ್ಲಿಂದ ಹುಬ್ಬಳ್ಳಿಗೆ ಬರಲು ಡಿಸೆಂಬರ್ 2ರ ವಿಮಾನ ಬುಕ್ ಮಾಡಿದ್ದರು. ಕೆಲ ಸಂಬಂಧಿಕರು ಭುವನೇಶ್ವರ–ಮುಂಬೈ–ಹುಬ್ಬಳ್ಳಿ ಮಾರ್ಗದಲ್ಲಿ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ಡಿಸೆಂಬರ್ 2ರ ಬೆಳಗ್ಗೆ 9ರಿಂದ ಇಂಡಿಗೋ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗಿದೆ. ಅನೇಕ ವಿಮಾನಗಳ ಸಂಚಾರ ರದ್ದಾಗಿದೆ. ಭುವನೇಶ್ವರದಿಂದ ಮೇಧಾ ಕ್ಷೀರಸಾಗರ ಹಾಗೂ ಸಂಗಮ ದಾಸ್ ಪ್ರಯಾಣಿಸಬೇಕಿದ್ದ ವಿಮಾನ ಸಂಚಾರ ಮರುದಿನ (ಡಿ.3) ಬೆಳಗಿನ 4–5 ಗಂಟೆಗಳವರೆಗೆ ವಿಳಂಬವಾಗುವ ಸಂದೇಶ ಬಂದಿತ್ತು. ಕೊನೇ ಕ್ಷಣದಲ್ಲಿ ಏಕಾಏಕಿ ಡಿಸೆಂಬರ್ 3ರಂದು ಬೆಳಗ್ಗೆ ವಿಮಾನ ಸಂಚಾರವೇ ರದ್ದಾಯಿತು. ಪರಿಣಾಮವಾಗಿ ವಧು-ವರರು ಹುಬ್ಬಳ್ಳಿಗೆ ಆರಕ್ಷತೆ ವೇಳೆಗೆ ತಲುಪಲು ಸಾಧ್ಯವಾಗಲಿಲ್ಲ.

ಈ ನಡುವೆ ಗುಜರಾತ್ ಭವನದಲ್ಲಿ ಆರತಕ್ಷತೆಯ ಎಲ್ಲಾ ಸಿದ್ಧತೆಗಳೂ ಪೂರ್ಣಗೊಂಡಿದ್ದರಿಂದ, ಕುಟುಂಬಸ್ಥರು ವಧುವಿನ ತಂದೆ-ತಾಯಿ ತಮ್ಮ ಮಗಳು ಹಾಗೂ ಅಳಿಯನ ಬದಲು ವಧು-ವರರ ಕುರ್ಚಿಯಲ್ಲಿ ಕುಳಿತು ಶಾಸ್ತ್ರಗಳನ್ನು ನಡೆಸಿದರು.

ವಧು ಮೇಧಾ ಮತ್ತು ವರ ಸಂಗಮ ದಾಸ್ ಇಬ್ಬರೂ ಭುವನೇಶ್ವರದಲ್ಲೇ ಸಿದ್ಧರಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಆರತಕ್ಷತೆಯಲ್ಲಿ ಭಾಗವಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !