ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಕಾರಣದ ಮುಂದಿನ ಬೆಳವಣಿಗೆಗಳು ಹಾಗೂ ಪ್ರಮುಖ ನೀರಾವರಿ ಯೋಜನೆಗಳ ಕುರಿತು ಚರ್ಚಿಸಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ದೆಹಲಿ ಭೇಟಿಯ ಉದ್ದೇಶ ಹಾಗೂ ಹೈಕಮಾಂಡ್ ನಾಯಕರ ಭೇಟಿಯ ಕುರಿತು ಸ್ಪಷ್ಟನೆ ನೀಡಿದರು.
ಕೇಂದ್ರ ಜಲಶಕ್ತಿ ಸಚಿವರು ಕರೆದಿರುವ ನದಿ ಜೋಡಣೆ ಕುರಿತ ಸಭೆಯಲ್ಲಿ ಪಾಲ್ಗೊಳ್ಳಲಿರುವ ಡಿಕೆಶಿ, ರಾಜ್ಯದ ಜೀವನಾಡಿ ಯೋಜನೆಗಳಾದ ಮಹದಾಯಿ, ಕೃಷ್ಣ ಮೇಲ್ದಂಡೆ, ಮೇಕೆದಾಟು ಮತ್ತು ಭದ್ರಾ ಮೇಲ್ದಂಡೆ ಯೋಜನೆಗಳ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಅರಣ್ಯ ಮತ್ತು ನಗರಾಭಿವೃದ್ಧಿ ಸಚಿವರನ್ನೂ ಭೇಟಿ ಮಾಡಿ ರಾಜ್ಯದ ಹಿತಾಸಕ್ತಿ ಕಾಪಾಡುವ ಬಗ್ಗೆ ಚರ್ಚಿಸಲಿದ್ದಾರೆ. ಅವಕಾಶ ಸಿಕ್ಕರೆ ಪ್ರಧಾನ ಮಂತ್ರಿಗಳನ್ನೂ ಭೇಟಿ ಮಾಡುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮಗೆ ಹೈಕಮಾಂಡ್‌ನಿಂದ ಸಂದೇಶ ಬಂದಿರುವುದನ್ನು ಖಚಿತಪಡಿಸಿದ ಡಿ.ಕೆ. ಶಿವಕುಮಾರ್, “ಸೂಕ್ತ ಸಮಯದಲ್ಲಿ ನಮ್ಮನ್ನು ದೆಹಲಿಗೆ ಕರೆಯುವುದಾಗಿ ನಾಯಕರು ತಿಳಿಸಿದ್ದಾರೆ. ಆಗ ನಾವಿಬ್ಬರೂ ಜೊತೆಯಾಗಿ ಹೋಗುತ್ತೇವೆ. ನಾನು ಯಾವುದನ್ನೂ ಕದ್ದುಮುಚ್ಚಿ ಮಾಡುವುದಿಲ್ಲ, ಎಲ್ಲವನ್ನೂ ತಿಳಿಸಿಯೇ ಮಾಡುತ್ತೇನೆ,” ಎಂದು ದೆಹಲಿ ಪ್ರವಾಸದ ಕುರಿತಾದ ಕುತೂಹಲಕ್ಕೆ ತೆರೆ ಎಳೆದರು.

