ಹೊಸದಿಗಂತ ಡಿಜಿಟಲ್ ಡೆಸ್ಕ್:
ಆ್ಯಶಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ಉಸಿರು ಬಿಗಿ ಹಿಡಿದು ಕಾದು ನೋಡುವ ಸ್ಥಿತಿಗೆ ತಂದು ನಿಲ್ಲಿಸಿದೆ. ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಈ ಟೆಸ್ಟ್ ಅಂತಿಮ ದಿನಕ್ಕೆ ಕಾಲಿಟ್ಟಿದ್ದು, ಗೆಲುವು–ಸೋಲು ಯಾರ ಪಾಲಿಗೆ ಎಂಬುದನ್ನು ಊಹಿಸುವುದು ಕಷ್ಟವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 371 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವನ್ನು ಆಸೀಸ್ ಬೌಲರ್‌ಗಳು 286 ರನ್‌ಗಳಿಗೆ ಮಿತಿಗೊಳಿಸಿ, ಮಹತ್ವದ ಮುನ್ನಡೆ ಪಡೆದುಕೊಂಡರು.
85 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 349 ರನ್‌ಗಳಿಸಿ ಇಂಗ್ಲೆಂಡ್ ಎದುರು ಭಾರೀ ಗುರಿ ಇಟ್ಟಿತು. ಈ ಮೂಲಕ ಆಂಗ್ಲರ ಮುಂದೆ 435 ರನ್‌ಗಳ ಸವಾಲು ಮೂಡಿತು. ಕಠಿಣ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ನಾಲ್ಕನೇ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 207 ರನ್ ಗಳಿಸಿತು.
ಐದನೇ ದಿನ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್, ಭೋಜನ ವಿರಾಮದ ವೇಳೆಗೆ 7 ವಿಕೆಟ್ ಕಳೆದುಕೊಂಡು 309 ರನ್‌ಗಳಿಸಿದೆ. ಕ್ರೀಸ್‌ನಲ್ಲಿ ವಿಲ್ ಜಾಕ್ಸ್ ಮತ್ತು ಬ್ರೈಡನ್ ಕಾರ್ಸ್ ಹೋರಾಟ ಮುಂದುವರೆಸಿದ್ದು, ಗೆಲುವಿಗೆ ಇನ್ನೂ 126 ರನ್ ಅಗತ್ಯವಿದೆ. ಇನ್ನೊಂದೆಡೆ ಆಸ್ಟ್ರೇಲಿಯಾಗೆ ಕೇವಲ ಮೂರು ವಿಕೆಟ್‌ಗಳೇ ಬೇಕಾಗಿವೆ. ಎರಡೂ ತಂಡಗಳ ನಡುವೆ ಪೈಪೋಟಿ ತೀವ್ರಗೊಂಡಿದ್ದು, ಈ ಟೆಸ್ಟ್ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ.

