Monday, December 22, 2025

ದಕ್ಷಿಣ ಭಾರತದ ಅತಿದೊಡ್ಡ ಜಾತ್ರೆಗೆ ಡೇಟ್ ಫಿಕ್ಸ್: ಫೆ.24 ರಿಂದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಸಂಭ್ರಮದ ಉತ್ಸವ

ಹೊಸದಿಗಂತ ವರದಿ, ಶಿರಸಿ:

ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಉತ್ಸವಗಳಲ್ಲಿ ಒಂದಾದ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವವು ಈ ಬಾರಿ ಫೆಬ್ರವರಿ ೨೪ ರಿಂದ ಮಾರ್ಚ್ ೪ ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ರವಿವಾರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ದೇವಸ್ಥಾನದ ಪುರೋಹಿತರಾದ ಶರಣ್ ಆಚಾರ್ಯ ಹಾಗೂ ಕೆರೇಕೈ ರಾಮಕೃಷ್ಣ ಭಟ್ಟ ಅವರು ಜಾತ್ರಾ ಮಹೋತ್ಸವದ ವಿವಿಧ ಧಾರ್ಮಿಕ ವಿವಿಧಾನಗಳ ದಿನಾಂಕಗಳನ್ನು ಅಕೃತವಾಗಿ ಪ್ರಕಟಿಸಿದರು.

ಪ್ರಕಟಿತ ವೇಳಾಪಟ್ಟಿಯಂತೆ, ಜನವರಿ ೭ ರಂದು ದೇವಿಯ ಪ್ರತಿಷ್ಠಾ ಮಂಟಪ ಕಳಚುವ ಮೂಲಕ ಜಾತ್ರೆಯ ಪೂರ್ವ ಸಿದ್ಧತೆಗಳು ಆರಂಭಗೊಳ್ಳಲಿವೆ. ಫೆಬ್ರವರಿ ೩ ರಂದು ಮೊದಲ ಹೊರಬೀಡು, ೬ ರಂದು ಎರಡನೇ ಹೊರಬೀಡು, ೧೦ ರಂದು ಮೂರನೇ ಹೊರಬೀಡು ಹಾಗೂ ೧೩ ರಂದು ನಾಲ್ಕನೇ ಹೊರಬೀಡು ನಡೆಯಲಿದೆ. ಇದೇ ಫೆಬ್ರವರಿ ೧೩ ರಂದು ರಥದ ಮರಕ್ಕೆ ವಿಶೇಷ ಪೂಜೆ ನೆರವೇರಲಿದ್ದು, ಫೆಬ್ರವರಿ ೧೮ ರಂದು ದೇವಿಯ ವಿಗ್ರಹ ವಿಸರ್ಜನೆ ಪ್ರಕ್ರಿಯೆ ನಡೆಯಲಿದೆ.

?ಜಾತ್ರೆಯ ಪ್ರಮುಖ ಘಟ್ಟವಾದ ರಥದ ಕಲಶಾರೋಹಣ ಹಾಗೂ ಕಲ್ಯಾಣ ಪ್ರತಿಷ್ಠೆಯು ಫೆಬ್ರವರಿ ೨೪ ರಂದು ಜರುಗಲಿದ್ದು, ಫೆಬ್ರವರಿ ೨೫ ರಂದು ದೇವಿಯ ಭವ್ಯ ರಥೋತ್ಸವ ಹಾಗೂ ಶೋಭಾ ಯಾತ್ರೆ ನಡೆಯಲಿದೆ. ಫೆಬ್ರವರಿ ೨೬ ರ ಬೆಳಿಗ್ಗೆ ೫ ಗಂಟೆಯಿಂದ ಜಾತ್ರಾ ಗದ್ದುಗೆಯಲ್ಲಿ ಭಕ್ತರಿಂದ ವಿವಿಧ ಸೇವೆಗಳ ಸ್ವೀಕಾರ ಆರಂಭವಾಗಲಿದೆ. ಮಾರ್ಚ್ ೪ ರ ಬೆಳಿಗ್ಗೆ ೧೧ ಗಂಟೆಯವರೆಗೆ ಪೂಜಾ ಸೇವೆಗಳು ನಡೆಯಲಿದ್ದು, ತದನಂತರ ವಿಸರ್ಜನಾ ವಿವಿಧಾನಗಳೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಬಳಿಕ ಮಾರ್ಚ್ ೧೯ ರ ಯುಗಾದಿಯ ಶುಭ ದಿನದಂದು ದೇವಿಯ ಪುನಃ ಪ್ರತಿಷ್ಠಾಪನೆ ನಡೆಯಲಿದೆ ಎಂದು ಪುರೋಹಿತರು ಮಾಹಿತಿ ನೀಡಿದರು.

ಈ ಮಹತ್ವದ ಸಭೆಯಲ್ಲಿ ಶಾಸಕ ಭೀಮಣ್ಣ ಟಿ. ನಾಯ್ಕ, ದೇವಸ್ಥಾನದ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುಧೇಶ ಜೋಗಳೇಕರ್, ಬಾಬುದಾರ ಪ್ರಮುಖ ಜಗದೀಶ ಗೌಡ, ಡಿಎಸ್‌ಪಿ ಗೀತಾ ಪಾಟೀಲ ಹಾಗೂ ಎಸಿ ಕಾವ್ಯಾರಾಣಿ ಉಪಸ್ಥಿತರಿದ್ದರು. ಅಲ್ಲದೆ ಧರ್ಮದರ್ಶಿಗಳಾದ ಸುದೀರ ಹಂದ್ರಾಳ, ಎಸ್.ಪಿ. ಶೆಟ್ಟಿ, ವತ್ಸಲಾ ಹೆಗಡೆ ಮತ್ತು ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಜಾತ್ರೆಯ ಯಶಸ್ವಿ ನಿರ್ವಹಣೆಯ ಕುರಿತು ಚರ್ಚಿಸಿದರು.

error: Content is protected !!