Sunday, January 11, 2026

ಬಂಗಾಳ ರಾಜಕೀಯದಲ್ಲಿ ಸಂಚಲನ: ಟಿಎಂಸಿಗೆ ಶಾಕ್ ನೀಡಿ ಹಳೆ ಗೂಡಿಗೆ ಸೇರಿದ ಮೌಸಮ್ ನೂರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಪ್ರಬಲ ನಾಯಕಿ ಹಾಗೂ ರಾಜ್ಯಸಭಾ ಸದಸ್ಯೆ ಮೌಸಮ್ ನೂರ್ ಅವರು ಶನಿವಾರ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದಾರೆ.

ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ, ಪಶ್ಚಿಮ ಬಂಗಾಳದ ಎಐಸಿಸಿ ಉಸ್ತುವಾರಿಗಳಾದ ಜೈರಾಮ್ ರಮೇಶ್, ಗುಲಾಮ್ ಅಹ್ಮದ್ ಮೀರ್ ಮತ್ತು ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶುಭಂಕರ್ ಸರ್ಕಾರ್ ಅವರ ಸಮ್ಮುಖದಲ್ಲಿ ನೂರ್ ಅವರು ಕಾಂಗ್ರೆಸ್ ಸೇರಿದರು.

ಪಕ್ಷಕ್ಕೆ ಮರಳಿದ ನಂತರ ಮಾತನಾಡಿದ ಮೌಸಮ್ ನೂರ್ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದರು. “ಪಶ್ಚಿಮ ಬಂಗಾಳಕ್ಕೆ ಈಗ ಬದಲಾವಣೆಯ ಅಗತ್ಯವಿದೆ. ಆ ಬದಲಾವಣೆ ನನ್ನಿಂದಲೇ ಆರಂಭವಾಗಲಿ ಎಂದು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಯಾವುದೇ ಷರತ್ತುಗಳನ್ನು ವಿಧಿಸದೆ, ತಾಯ್ಮನೆಗೆ ಮರಳಿದ ಖುಷಿಯಲ್ಲಿದ್ದೇನೆ,” ಎಂದು ತಿಳಿಸಿದರು.

ಮೌಸಮ್ ನೂರ್ ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು ಈ ವರ್ಷದ ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಮೂಲಗಳ ಪ್ರಕಾರ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅವರು ಮಾಲ್ದಾ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತ ಎನ್ನಲಾಗಿದೆ.

Related articles

Comments

ಇತರರಿಗೂ ಹಂಚಿ

Latest articles

Newsletter

error: Content is protected !!