ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ಜೋಶಿಮಠದ ಔಲಿ ರಸ್ತೆಯಲ್ಲಿರುವ ಸೇನಾ ಶಿಬಿರದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಶಿಬಿರದ ಒಳಗಿರುವ ಅಂಗಡಿಯೊಂದರಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದು, ಪರಿಸರವೆಲ್ಲ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು.
ಘಟನೆ ಸಂಭವಿಸುತ್ತಿದ್ದಂತೆ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬೆಂಕಿ ಅವಘಡಕ್ಕೆ ನಿಖರ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಅದೃಷ್ಟವಶಾತ್ ಪ್ರಾಣಾಪಾಯದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಸೇನಾ ನೆಲೆಗಳಲ್ಲಿ ಇಂತಹ ಅವಘಡಗಳು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಲೇಹ್‌ನ ಡಿಗ್ರಿ ಕಾಲೇಜು ಸಮೀಪದ ಸೇನಾ ಶಿಬಿರದಲ್ಲೂ ಇದೇ ರೀತಿಯ ಭೀಕರ ಬೆಂಕಿ ಕಾಣಿಸಿಕೊಂಡಿತ್ತು. ಅಂದು ಪೊಲೀಸರು ಮತ್ತು ಸೇನಾ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿತ್ತು. ಸದ್ಯ ಜೋಶಿಮಠದ ಘಟನೆಯ ಕುರಿತು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

