Friday, September 5, 2025

ಪ್ರಧಾನಿ ಮೋದಿ ಇಂದು ದಣಿದಂತೆ ಕಾಣುತ್ತಿದ್ದರು, ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ: ಕಾಂಗ್ರೆಸ್ ನಾಯಕ ಜೈರಾಮ್‌ ರಮೇಶ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಂಪು ಕೋಟೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಕಾಂಗ್ರೆಸ್‌ ಟೀಕಿಸಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ವನ್ನು ಸಮಾಧಾನಪಡಿಸಲು, ಮೋದಿ ಸ್ವಾತಂತ್ರ್ಯೋತ್ಸವದ ಭಾಷಣವನ್ನು ರಾಜಕೀಯಗೊಳಿಸಿದ್ದಾರೆ ಟೀಕಿಸಿದೆ.

ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಮೋದಿ ಅವರು ಭಾಷಣವನ್ನು ಅರ್ಥಹೀನ, ಹಳಸಿದ, ನೀರಸ ಹಾಗೂ ಬೂಟಾಟಿಕೆ ಎಂದು ಕರೆದಿದ್ದಾರೆ.

ಪ್ರಧಾನಿ ಮೋದಿ, ತಮ್ಮ ಅಧಿಕಾರಾವಧಿಯ ವಿಸ್ತರಣೆಗಾಗಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸಮಾಧಾನಪಡಿಸಲು ಕೆಂಪು ಕೋಟೆ ಭಾಷಣವನ್ನು ಬಳಸಿಕೊಂಡಿದ್ದಾರೆ. ಪ್ರಧಾನಿಯವರ ಇಂದಿನ ಭಾಷಣದ ಅತ್ಯಂತ ತೊಂದರೆದಾಯಕ ಅಂಶವೆಂದರೆ, ಕೆಂಪುಕೋಟೆಯಿಂದ ಆರ್‌ಎಸ್‌ಎಸ್‌ನ ಹೆಸರನ್ನು ಉಲ್ಲೇಖಿಸಿರುವುದಾಗಿದೆ. ಇದು ಸಾಂವಿಧಾನಿಕ, ಜಾತ್ಯತೀತ ಗಣರಾಜ್ಯದ ಚೈತನ್ಯದ ಸ್ಪಷ್ಟ ಉಲ್ಲಂಘನೆಯಾಗಿದೆ. ಮುಂದಿನ ತಿಂಗಳು ಪ್ರಧಾನಿ ಮೋದಿ 75ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಆರ್‌ಎಸ್‌ಎಸ್‌ನ ಉಲ್ಲೇಖ ಅಧಿಕಾರದಲ್ಲಿ ಮುಂದುವರೆಯುವ ಹತಾಶ ಪ್ರಯತ್ನವಲ್ಲದೇ ಬೇರೇನೂ ಅಲ್ಲ ಎಂದಿದ್ದಾರೆ.

ಚುನಾವಣಾ ಆಯೋಗದಂತಹ ನಮ್ಮ ಮೂಲಭೂತ ಸಾಂವಿಧಾನಿಕ ಸಂಸ್ಥೆಗಳ ಪತನಕ್ಕೆ ಪ್ರಧಾನಿಯೇ ಕಾರಣ ಮತ್ತು ಮಾಸ್ಟರ್ ಮೈಂಡ್ ಆಗಿದ್ದರೂ, ಏಕತೆ, ಸೇರ್ಪಡೆ ಮತ್ತು ಪ್ರಜಾಪ್ರಭುತ್ವದ ಕುರಿತು ಪ್ರಧಾನಿಯವರು ದೀರ್ಘ ಭಾಷಣ ಮಾಡಿದ್ದಾರೆ. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಕುರಿತು ವಿರೋಧ ಪಕ್ಷದ ನಾಯಕರು ಎತ್ತಿದ ಮೂಲಭೂತ ಪ್ರಶ್ನೆಗಳಿಗೆ ಇನ್ನೂ ಉತ್ತರಿಸಿಲ್ಲ. ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮೂಲಕ ಲಕ್ಷಾಂತರ ಮತದಾರರನ್ನು ಮತದಾನದಿಂದ ವಂಚಿತಗೊಳಿಸಲಾಗುತ್ತಿದೆ ಎಂದು ಆಕ್ಷೇಪಿಸಿದ್ದಾರೆ.

ಸ್ವಾತಂತ್ರ್ಯ ದಿನವು ಒಂದು ದೃಷ್ಟಿಕೋನ, ಪ್ರಾಮಾಣಿಕತೆ ಮತ್ತು ಸ್ಫೂರ್ತಿಯ ಕ್ಷಣವಾಗಿರಬೇಕು. ಆದರೆ ಇಂದಿನ ಭಾಷಣವು ಸ್ವ-ಪ್ರಶಂಸೆ ಮತ್ತು ಆಯ್ದ ಕಥೆಗಳ ಮಂದ ಮಿಶ್ರಣವಾಗಿತ್ತು. ದೇಶದ ಆಳವಾದ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಬಿಕ್ಕಟ್ಟು ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆಯ ಬಗ್ಗೆ ಯಾವುದೇ ಪ್ರಾಮಾಣಿಕ ಉಲ್ಲೇಖವಿರಲಿಲ್ಲ ಎಂದು ಟೀಕಿಸಿದರಲ್ಲದೇ ಕೊನೆಯಲ್ಲಿ ಪ್ರಧಾನಿ ಇಂದು ದಣಿದಂತೆ ಕಾಣುತ್ತಿದ್ದರು. ಅವರು ಶೀಘ್ರದಲ್ಲೇ ನಿವೃತ್ತರಾಗಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ಈ ಕುರಿತು ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ದಾರ್ಶನಿಕ ನಾಯಕರು ಬಲವಾದ ಭಾರತಕ್ಕೆ ಅಡಿಪಾಯ ಹಾಕಿದ್ದಾರೆ. ಆದರೆ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಯಾವುದೇ ಮಟ್ಟದ ಅನೈತಿಕತೆಗೆ ಇಳಿಯಲು ಸಿದ್ಧವಾಗಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯು ಕಾಂಗ್ರೆಸ್ಸಿನ ಕಥೆಗೆ ಸಮಾನಾರ್ಥಕವಾಗಿದೆ. ಆದರೆ ಸ್ವಾತಂತ್ರ್ಯ ವೀರರು ದೇಶಕ್ಕಾಗಿ ಕಂಡ ಕನಸು ಈಗ ಮತ್ತಷ್ಟು ದೂರ ಸರಿಯುತ್ತಿದೆ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಅನೈತಿಕ ಮಾರ್ಗವನ್ನು ಅನುಸರಿಸುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.

ಇದನ್ನೂ ಓದಿ