ಹೊಸದಿಗಂತ ಕಲಬುರಗಿ:
ರಾಜ್ಯ ರಾಜಕೀಯದಲ್ಲಿ ಸಂಕ್ರಾಂತಿ ಬಳಿಕ ದೊಡ್ಡ ಬದಲಾವಣೆಯಾಗಲಿದೆ ಎನ್ನುವ ವದಂತಿಗಳಿಗೆ ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ತೆರೆ ಎಳೆದಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
“ಕಾಂಗ್ರೆಸ್ ಪಕ್ಷಕ್ಕೆ ಹೈಕಮಾಂಡ್ ಎಂಬ ಸುಪ್ರೀಂ ಅಧಿಕಾರವಿದೆ. ಯಾರು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕು ಅಥವಾ ಯಾರು ಕೆಳಗಿಳಿಯಬೇಕು ಎಂಬುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರ. ಈ ಬಗ್ಗೆ ಹೈಕಮಾಂಡ್ ನಮಗೆ ಈಗಾಗಲೇ ಸ್ಪಷ್ಟ ನಿರ್ದೇಶನ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ಬದಲಾಗುವುದಿಲ್ಲ,” ಎಂದು ಮುನಿಯಪ್ಪ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಚಿವರು, “ಸಿದ್ದರಾಮಯ್ಯ ಅವರು ಕಳೆದ ಎರಡೂವರೆ ವರ್ಷಗಳಿಂದ ಅದ್ಭುತವಾಗಿ ಕೆಲಸ ಮಾಡುತ್ತಿದ್ದಾರೆ. ಮಾಜಿ ಸಿಎಂ ದೇವರಾಜ ಅರಸು ಅವರು ರಾಜ್ಯದ ಅಭಿವೃದ್ಧಿಗೆ ಬುನಾದಿ ಹಾಕಿಕೊಟ್ಟರೆ, ಸಿದ್ದರಾಮಯ್ಯ ಅವರು ಆ ಬುನಾದಿಯ ಮೇಲೆ ಭವ್ಯವಾದ ಮನೆಯನ್ನು ಕಟ್ಟುತ್ತಿದ್ದಾರೆ. ಎಲ್ಲಾ ವರ್ಗದ ಜನರಿಗೆ ಸಮಾನ ಅವಕಾಶ ನೀಡುತ್ತಿರುವ ಅವರು, ಐದು ವರ್ಷಗಳ ಕಾಲ ಪೂರ್ಣಾವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ರಾಜಕೀಯದಲ್ಲಿ ‘ಸಂಕ್ರಾಂತಿ ಕ್ರಾಂತಿ’ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಮುನಿಯಪ್ಪ ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

